ಬೆಳಗಾವಿ: ಸಚಿವ ರಮೇಶ್ ಜಾರಕಿಹೊಳಿ, ದೋಸ್ತಿ ಸರ್ಕಾರವನ್ನು ಉರುಳಿಸುವಲ್ಲಿ ಅತೀ ಪ್ರಮುಖ ಪಾತ್ರ ವಹಿಸಿದ್ದ ರಮೇಶ್ ಜಾರಕಿಹೊಳಿ ಇದೀಗ ದೊಡ್ಡ ಮ್ಟಟದ ನಾಯಕನಾಗಿ ಬೆಳೆಯಲು ಮಾಜಿ ಸಚಿವ ಡಿ ಕೆ ಶಿವಕುಮಾರ್ ಕಾರಣವೆಂದಿದ್ದಾರೆ. ಗೋಕಾಕದಲ್ಲಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಅಭಿಮಾನಿ ಬಳಗದಿಂದ ಬೆಳ್ಳಿ ಗದೆ ನೀಡಿ ಮುಖಂಡರು ಸನ್ಮಾನಿಸಿದ್ದಾರೆ. 
 
ಕಾಂಗ್ರೆಸ್‌ ನಾಯಕ ಡಿ.ಕೆ. ಶಿವಕುಮಾರ್‌ ವಿರೋಧಿಸಿದ್ದರಿಂದಲೇ ನಾನು ಲೀಡರ್‌ ಆದೆ. ಹೀಗಾಗಿ, ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಗೋಕಾಕಕ್ಕೆ ಭಾನುವಾರ ಬಂದ ಅವರು ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ‘ಡಿಕೆಶಿ ಅಂದು ಅಪ್ಪಿಕೊಂಡಿದ್ದರೆ ನಾನು ದೊಡ್ಡ ಲೀಡರ್ ಆಗುತ್ತಿರಲಿಲ್ಲ. ಕಾಂಗ್ರೆಸ್ ನಾಯಕರು ನನ್ನನ್ನು ನಿರ್ಲಕ್ಷಿಸಿದ್ದು ಒಳ್ಳೆಯದೇ ಆಯಿತು. ಬಿಜೆಪಿಯಲ್ಲಿ ಸಚಿವರಾಗುತ್ತೇನೆಂದು ಕನಸಲ್ಲೂ ಊಹಿಸಿರಲಿಲ್ಲ. ಶಾಸಕ ಮಹೇಶ ಕುಮಠಳ್ಳಿ ಅಂಥವರು ಜೊತೆಗಿದ್ದರೆ ಜಗತ್ತು ಗೆಲ್ಲಬಹುದು. ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಿಂದ ಹೊರಬರಲು 36 ಶಾಸಕರು ಸಿದ್ಧವಾಗಿದ್ದೆವು. ಉಳಿದದ್ದು 17 ಮಂದಿ ಮಾತ್ರ’ ಎಂದು ತಿಳಿಸಿದ್ದಾರೆ. 
 
‘ಸಚಿವ ಸ್ಥಾನ ತಿರಸ್ಕರಿಸಿ ಗೋಕಾಕಕ್ಕೆ ಹೊರಟಿದ್ದೆ. ಆದರೆ, ಶಾಸಕರಾದ ಮಹೇಶ ಕುಮಠಳ್ಳಿ, ಬಾಲಚಂದ್ರ ಜಾರಕಿಹೊಳಿ ಕಾರಣದಿಂದ ಪ್ರಮಾಣವಚನ ಸ್ವೀಕರಿಸಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ವರಿಷ್ಠ ಅಮಿತ್ ಶಾ ಅವರನ್ನು ನಂಬಿದ್ದೇನೆ. ನೀರಾವರಿ ಖಾತೆ ಕೊಡ್ತಾರೋ, ಲೈಬ್ರರಿ ಕೊಡುತ್ತಾರೋ ಗೊತ್ತಿಲ್ಲ. ಆರ್‌.ಎಸ್‌.ಎಸ್‌ ಸಹಕಾರವಿದೆ ಎಂದಿದ್ದಾರೆ. 
 
ಗೋಕಾಕದಲ್ಲಿ ಕಾಂಗ್ರೆಸ್‌ನ ಲಖನ್ ಜಾರಕಿಹೊಳಿಯಿಂದ ಬಹಳ ಅನ್ಯಾಯವಾಗಿದೆ. ಕುಟುಂಬದ ವಿಚಾರ ಬಂದರೆ ಜಾರಕಿಹೊಳಿ ಸಹೋದರರು ಎಂದಿಗೂ ಒಂದೇ. ಹಿರಿಯ ಸಹೋದರನಾಗಿ ನೋವು ನುಂಗಬೇಕಾಗುತ್ತದೆ. ರಾಜಕೀಯವಾಗಿ ಯಾರಿಗೂ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇನೆ. ಕಾಂಗ್ರೆಸ್‌ ಶಾಸಕ ಸತೀಶ ಜಾರಕಿಹೊಳಿಗೆ ಮುಖ್ಯಮಂತ್ರಿ ಆಗುವ ಯೋಗ್ಯತೆ ಇದೆ. ಅವರು ತಾಳ್ಮೆಯಿಂದ ಇದ್ದರೆ ಒಳ್ಳೆಯದು. ಅವರು 20 ವರ್ಷಗಳಲ್ಲಿ ಮಾಡಲಾಗದ್ದನ್ನು ನಾನು ಎರಡೇ ವರ್ಷಗಳಲ್ಲಿ ಮಾಡಿದ್ದೇನೆ. ಒಳ್ಳೆಯದಕ್ಕಾಗಿ ಹಟ ಮಾಡುತ್ತೇನೆ’ ಎಂದು ತಿಳಿಸಿದ್ದಾರೆ.
 
 

మరింత సమాచారం తెలుసుకోండి: