ಭಾರತ ಸೇರಿದಂತೆ ವಿಶ್ವದ 250ಕ್ಕೂ ಹೆಚ್ಚು ದೇಶಗಳಲ್ಲಿ ಕಿಲ್ಲರ್ ಕೊರೊನಾ ಆರ್ಭಟ ತೀವ್ರವಾಗಿದ್ದು , ವ್ಯಾಪಕ ಸಾವು ನೋವು ಮತ್ತು ಸೋಂಕು ಹೆಚ್ಚಳವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ವೈದ್ಯ ಲೋಕ ಈ ಹೆಮ್ಮಾರಿಯನ್ನು ಶತಾಯ ಗತಾಯ ನಿರ್ಮೂಲನೆ ಮಾಡುವ ನೆಪದಲ್ಲಿ ಮತ್ತೊಂದು ದಿಟ್ಟ ಹೆಜ್ಜೆ ಇರಿಸಿದೆ.  

ಈಗಾಗಲೇ ಗಿಲೀಡ್ ಸೈನ್ಸ್ ಇಂಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಮತ್ತು ಸದ್ಯಕ್ಕೆ ಕೋವಿಡ್-19 ಚಿಕಿತ್ಸೆಗೆ ತುರ್ತು ಪರಿಹಾರ ಎಂದು ಪರಿಗಣಿಸಲ್ಪಟ್ಟಿರುವ ರೆಮಿಡಿಸಿವಿರ್ ಎಂಬ ಔಷಧಿಯನ್ನು ರೋಗಿಗಳ ಮೇಲೆ ಪ್ರಥಮ ಬಾರಿಗೆ ಪ್ರಯೋಗಿಸಿ ಮತ್ತಷ್ಟು ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ವೈದ್ಯರು ಮತ್ತು ಆರೋಗ್ಯ ಕ್ಷೇತ್ರದ ಖ್ಯಾತನಾಮರು ಮುಂದಾಗಿದ್ದಾರೆ.

 

ಅಮೆರಿಕಾ ಸೇರಿದಂತೆ ವಿಶ್ವದ ಪ್ರಬಲ ವಿಷಯಗಳು ಈವರೆಗೂ ಅಭಿವೃದ್ಧಿಪಡಿಸಿರುವ ಔಷಧಿ ಮತ್ತು ಲಸಿಕೆಗಳನ್ನು ಪ್ರಬಲ ಕೊರೊನಾ ವೈರಸ್ ಜೀರ್ಣಿಸಿಕೊಂಡು ರಣ ಕೇಕೆ ಮುಂದುವರೆಸುವ ಹಿನ್ನೆಲೆಯಲ್ಲಿ ಈ ಪೀಡೆಯನ್ನು ನಿಗ್ರಹಿಸಲು ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ಈಗ ಸದ್ಯಕ್ಕೆ ಇರುವ ಪ್ರಬಲ ಅಸ್ತ್ರವೆಂದರೆ ರೆಮಿಡಿಸಿವಿರ್. ದೆಹಲಿಯಲ್ಲಿ ಈ ಔಷಧಿಯನ್ನು ರೋಗಿಗಳ ಮೇಲೆ ಅತ್ಯಂತ ಎಚ್ಚರಿಕೆಯಿಂದ ಪ್ರಯೋಗಿಸಲು ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ.

 

ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಇಟಲಿ ಮತ್ತಿತರ ದೇಶಗಳ ವೈದ್ಯರಿಗೂ ಸಹ ಸದ್ಯಕ್ಕೆ ಈ ಔಷಧಿ ಪರಿಣಾಮಕಾರಿ ಎಂಬುದು ದೃಢಪಟ್ಟಿದೆ. ಆದರೆ ಕೆಲವು ರಾಷ್ಟ್ರಗಳನ್ನು ಹೊರತುಪಡಿಸಿ ಬೇರಾವ ದೇಶಗಳು ಈ ಔಷಧಿಯನ್ನು ಪೂರ್ಣ ಪ್ರಮಾಣದಲ್ಲಿ ಪ್ರಯೋಗಕ್ಕೆ ಒಳಪಡಿಸಲು ಅನುಮತಿ ನೀಡಿಲ್ಲವಾದರೂ ವೈದ್ಯರಿಗೆ ಈಗ ಲಭ್ಯವಿರುವ ತುರ್ತು ಪರಿಣಾಮಕಾರಿ ಔಷಧಿ ರೆಮಿಡಿಸಿವಿರ್.

 

ಇದೇ ಔಷಧಿಯನ್ನು ಮೂಲವಾಗಿಟ್ಟುಕೊಂಡು ಭಾರತ, ದಕ್ಷಿಣ ಕೊರಿಯಾ, ಜಪಾನ್ ಮೊದಲಾದ ದೇಶಗಳಲ್ಲಿ ಹಗಲು-ರಾತ್ರಿ ನಿರಂತರ ಪ್ರಯೋಗಗಳು ಮುಂದುವರೆದಿವೆ. ಇಲಿಗಳು ಮತ್ತು ಹಂದಿಗಳ ಮೇಲೆ ಈ ಔಷಧಿಯನ್ನು ಬಳಸಿ ನಡೆಸಲಾದ ಪ್ರಯೋಗ ಅತ್ಯಂತ ಯಶಸ್ವಿಯಾಗಿದ್ದು , ಇದನ್ನು ಮಾನವನ ಮೇಲೆ ಅತ್ಯಂತ ಸುರಕ್ಷಿತ ರೀತಿಯಲ್ಲಿ ಎಚ್ಚರಿಕೆಯಿಂದ ಬಳಸುವ ನಿಟ್ಟಿನಲ್ಲಿ ಪ್ರಯೋಗಗಳು ಮುಂದುವರೆದಿವೆ.

ಈಗಾಗಲೇ ವಿಶ್ವದಲ್ಲಿ ಸಾವಿನ ಸಂಖ್ಯೆ 4 ಲಕ್ಷ ಸನಿಹದಲ್ಲಿದ್ದು , 67 ಲಕ್ಷಕ್ಕೂ ಹೆಚ್ಚು ಮಂದಿ ರೋಗ ಪೀಡಿತರಾಗಿರುವುದು ವೈದ್ಯ ಲೋಕದ ನಿದ್ದೆಗೆಡಿಸಿದೆ. ಜೂನ್ ತಿಂಗಳೊಳಗೆ ಮಹಾಮಾರಿಯನ್ನು ಶತಾಯ ಗತಾಯ ಪ್ರಪಂಚದಿಂದಲೇ ತೊಲಗಿಸುವ ನಿಟ್ಟಿನಲ್ಲಿ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳು ಸಂಘಟಿತ ವೈದ್ಯಕೀಯ ಸಹಕಾರದೊಂದಿಗೆ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ.

 

ಇಸ್ರೇಲ್ ವಿಜ್ಞಾನಿಗಳು ಸಹ ನಡೆಸಿರುವ ಇದೇ ರೀತಿಯ ಮತ್ತೊಂದು ಪ್ರಯೋಗ ರೆಮಿಡಿಸಿವಿರ್ ಸದ್ಯಕ್ಕೆ ರೋಗಿಗಳ ಚಿಕಿತ್ಸೆಗೆ ಪ್ರಬಲ ಮತ್ತು ಪರಿಣಾಮಕಾರಿ ಎಂದು ದೃಢಪಟ್ಟಿದೆ. ಭಾರತ ಮತ್ತು ಅಮೆರಿಕ ಈ ಬಗ್ಗೆ ತುಂಬಾ ಮುತುವರ್ಜಿ ವಹಿಸಿದ್ದು , ಅತಿ ಶೀಘ್ರದಲ್ಲಿಯೇ ಈ ಔಷಧಿಯನ್ನು ಬಳಸಿ ಅಂತಿಮ ಹಂತದ ಪ್ರಯೋಗವನ್ನು ಸಫಲಗೊಳಿಸಿ ಲಸಿಕೆಯೊಂದನ್ನು ಅಭಿವೃದ್ದಿಗೊಳಿಸಲು ಶತ ಪ್ರಯತ್ನ ಮುಂದುವರೆಸಿದೆ.

ಈ ನಿಟ್ಟಿನಲ್ಲಿ ಈ ವಾರದೊಳಗೆ ಆಶಾದಾಯಕ ಫಲಿತಾಂಶ ಲಭಿಸುವ ಸಾಧ್ಯತೆ ಇದ್ದು , ಜೂನ್ ಅಂತ್ಯದೊಳಗೆ ಕಿಲ್ಲರ್ ಕೊರೊನಾಗೆ ರಾಮ ಬಾಣವಾಗಿ ಈ ಲಸಿಕೆ ಲಭಿಸುವ ನಿರೀಕ್ಷೆ ಇದೆ.

 

మరింత సమాచారం తెలుసుకోండి: