ಈಗಾಗಲೇ ಮುಂಗಾರು ಶುರುವಾಗಿದ್ದು ರಾಜ್ಯದ ನಾನಾ ಭಾಗಗಳಲ್ಲಿ ಮಳೆಯಾಗುತ್ತಿದೆ. ಈ ಮಳೆಯಿಂದಾಗಿ ಕೆಲವರಿಗೆ ಅನುಕೂಲವಾದರೆ ಇನ್ನೂ ಕೆಲವರಿಗೆ ಅನಾನುಕೂಲವಾಗಿ ಪರಿಣಮಿಸಿದೆ. ಜೊತೆಗೆ ಹೆಚ್ಚಾಗಿ ಬೀಲುವ ಮಳೆಯಿಂದಾಗಿ ಅನೇಕ ನಗರಗಳಲ್ಲಿ ಸಾಕಷ್ಟು ತೊಂದರೆಯುಂಟಾಗುತ್ತದೆ. ಈ ತೊಂದರೆಗಳು ಆಗದಂತೆ ತಡೆಯಲು ಸರ್ಕಾರ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಇಂದು ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ಅಷ್ಟಕ್ಕೂ ಈ ಚರ್ಚೆಯಲ್ಲಿ ತೆಗೆದುಕೊಂಡ ಕ್ರಮಗಳೇನು,,?

 

 ರಾಜ್ಯದಲ್ಲಿ ಮುಂಗಾರು ಚುರುಕುಗೊಂಡ ಹಿನ್ನೆಲೆಯಲ್ಲಿ ತಕ್ಷಣವೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅನಾಹುತ ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು. ಯುದ್ಧ ಸಮಯದಲ್ಲಿ ಶಸ್ತ್ರಾಭ್ಯಾಸ ಆರಂಭಿಸುವ ಪರಿಪಾಠವನ್ನು ಬಿಟ್ಟು ಈಗಿನಿಂದಲೇ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಹೇಳಿದರು.

 

ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಮುಂಗಾರು ಮಳೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿದರು. ಸಭೆ ಆರಂಭಕ್ಕೂ ಮುನ್ನ ಮಾತನಾಡಿದ ಅವರು, ಇತ್ತೀಚೆಗೆ ಮಳೆ ಸುರಿದ ಕಾರಣ ಬೆಂಗಳೂರಿನಲ್ಲಿ ಹಲವರು ಸಾವನ್ನಪ್ಪಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಮುಂದೆ ಇಂತಹ ಅನಾಹುತ ಸಂಭವಿಸದಂತೆ ಎಚ್ಚರಿಕೆ ತೆಗೆದುಕೊಳ್ಳಬೇಕೆಂದು ಸೂಚಿಸಿದರು.

 

ಸಾರ್ವಜನಿಕರ ಹಿತ ಕಾಪಾಡುವುದು ನಮ್ಮ ಮುಖ್ಯ ಉದ್ದೇಶ. ಆ ನಿಟ್ಟಿನಲ್ಲಿ ಅಧಿಕಾರಿಗಳು ಅಹೋರಾತ್ರಿ ಕೆಲಸ ಮಾಡಬೇಕು. ಸರ್ಕಾರದಿಂದ ಬೇಕಾದ ನೆರವನ್ನು ನಿಮಗೆ ನೀಡುತ್ತೇವೆ ಎಂದು ಹೇಳಿದರು. ಮಳೆಗಾಲ ಆರಂಭವಾದರೆ ಅನೇಕ ಕಡೆ ನೀರು ಸರಾಗವಾಗಿ ಹರಿದು ಹೋಗದೆ ಭಾರೀ ಪ್ರಮಾಣದ ನಷ್ಟ ಉಂಟಾಗುತ್ತದೆ. ಕೂಡಲೇ ಕಾಲುವೆಗಳಲ್ಲಿ ಹೂಳು ತೆಗೆಯಲು ಮುಂದಾಗಬೇಕು. ವಿಶೇಷವಾಗಿ ತಗ್ಗಿನ ಪ್ರದೇಶಗಳಲ್ಲಿ ಹೆಚ್ಚಿನ ಗಮನ ಹರಿಸಬೇಕೆಂದು ಸೂಚಿಸಿದರು.

 

ಮಳೆ ಆರಂಭವಾದಾಗ ಸಾರ್ವಜನಿಕರು ಮರದ ಕಡೆ ಎಲ್ಲಿಯೂ ನಿಲ್ಲದಂತೆ ಅರಿವು ಮೂಡಿಸಬೇಕು. ಇತ್ತೀಚೆಗೆ ಮರ ಬಿದ್ದು ಒಂದಿಬ್ಬರು ಸಾವನ್ನಪ್ಪಿರುವುದು ಅತ್ಯಂತ ನೋವಿನ ಸಂಗತಿ ಎಂದು ಸಿಎಂ ವಿಷಾದ ವ್ಯಕ್ತಪಡಿಸಿದರು. ಮಳೆಗಾಲ ಆರಂಭವಾದ ನಂತರ ನೀವು ಕೆಲಸ ಪ್ರಾರಂಭಿಸಿದರೆ ಏನೂ ಪ್ರಯೋಜನವಾಗುವುದಿಲ್ಲ. ಇದರಿಂದ ಸಾರ್ವಜನಿಕರು ತೊಂದರೆಗೆ ಸಿಲುಕುತ್ತಾರೆ. ಇರುವ ಆರ್ಥಿಕ ವ್ಯವಸ್ಥೆಯಲ್ಲೇ ಜನರಿಗೆ ತೊಂದರೆಯಾಗದಂತೆ ಕ್ರಮಗಳನ್ನು ಕೈಗೊಳ್ಳಿ ಎಂದರು.

 

ಬೆಂಗಳೂರಿನಂತಹ ಮಹಾನಗರದಲ್ಲಿ ಒಂದಿಷ್ಟು ವ್ಯತ್ಯಾಸವಾದರೂ ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಇದಕ್ಕೆ ಅವಕಾಶ ನೀಡದಂತೆ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳ ಸಮನ್ವಯತೆಯಲ್ಲಿ ಕೆಲಸ ಮಾಡಬೇಕು. ಸರ್ಕಾರ ನಿಮ್ಮ ಜತೆ ಸದಾ ಇರುತ್ತದೆ ಎಂದು ಅಭಯ ನೀಡಿದರು. ಈ ಬಾರಿ ಮಳೆಯಿಂದ ತೊಂದರೆಯಾಗದಂತೆ ಪಾಲಿಕೆ ಇಂದಿನಿಂದಲೂ ಕಾರ್ಯೋನ್ಮುಖರಾಗಬೇಕು. ಪ್ರತಿಯೊಂದಕ್ಕೂ ಸರ್ಕಾರವನ್ನು ನೆಚ್ಚಿಕೊಳ್ಳದೆ ಪಾಲಿಕೆಯು ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡಬೇಕೆಂದು ಸಿಎಂ ಸೂಚನೆ ಕೊಟ್ಟರು.

 

ಸಭೆಯಲ್ಲಿ ಸಚಿವರಾದ ಆರ್.ಅಶೋಕ್, ಬೈರತಿ ಬಸವರಾಜ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಬಿಬಿಎಂಪಿ ಆಯುಕ್ತ ಅನಿಲ್‍ಕುಮಾರ್, ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

మరింత సమాచారం తెలుసుకోండి: