ಈ ವರ್ಷ ತೆರೆಗೆ ಬಂದ ಸಿನೆಮಾಗಳಲ್ಲಿ ವಿಶಿಷ್ಟವಾಗಿ ನಿಲ್ಲುವ ಸಿನೆಮಾ ‘ಸೂಜಿದಾರ’. ಕಮರ್ಷಿಯಲ್ ಎಲಿಮೆಂಟುಗಳನ್ನು ಹೊಂದಿಯೂ ಕಲಾತ್ಮಕ ನೇಯ್ಗೆಯನ್ನು ಹೊಂದಿರುವ ಈ ಸಿನೆಮಾವನ್ನು ಈ ಕಾಲದ ಪರಿಭಾಷೆಯಂತೆ ‘ಹೊಸ ಅಲೆ’ಯ ಕ್ಯಟಗರಿಗೆ ಸೇರಿಸಬಹುದು.


ಕಥಾವಸ್ತುವಿನ ದೃಷ್ಟಿಯಿಂದ ಸೂಜಿದಾರ ಒಂದು ಸೂಕ್ಷ್ಮ ಸಂವೇದನೆಯ ಚಿತ್ರ. ‘ಮೈಮನ ಪೋಣಿಸೋ’ ಸೂಜಿದಾರ ಅನ್ನುವ ಶೀರ್ಷಿಕೆಯೇ ಇದರ ಅಂತರಂಗವನ್ನು ಬಿಚ್ಚಿಡುತ್ತದೆ. ಹರಕಲನ್ನು ಮುಚ್ಚುವ ತೇಪೆಯೂ ಆಗಬಲ್ಲ, ಕಸೂತಿಯಂತೆ ಚೆಂದವೂ ಕಾಣಬಲ್ಲ ಸಂಬಂಧಗಳನ್ನು ಪೋಣಿಸುವ ಹೊಲಿಗೆಯೇ ಸೂಜಿದಾರದ ಕಥಾವಸ್ತು.

ರಂಗಭೂಮಿ ಹಿನ್ನೆಲೆಯಿಂದ ಬಂದ ಮೌನೇಶ್ ಬಡಿಗೇರ್ ನಿರ್ದೇಶನದ ಚೊಚ್ಚಲ ಸಿನೆಮಾ ಇದು. ಈ ಸಿನೆಮಾದಲ್ಲಿ ಹರಿಪ್ರಿಯಾಗೆ ಯಶ್ ಶೆಟ್ಟಿ ನಾಯಕ. ಸುಚೇಂದ್ರ ಪ್ರಸಾದ್, ಚೈತ್ರ ಕೋಟೂರು, ತುಮಕೂರು ಆನಂದ್, ಹರೀಶ್, ಅಚ್ಯುತ್ ಕುಮಾರ್ ಮೊದಲಾದವರು ಇತರ ಪಾತ್ರಗಳಿಗೆ ಜೀವ ತುಂಬಿದ್ದಾರೆ.


ಸಾಮಾನ್ಯ ಕಮರ್ಷಿಯಲ್ ಸಿನೆಮಾಗಳಿಗೆ ಹೋಲಿಸಿದರೆ ಸೂಜಿದಾರ ಮೇಕಿಂಗ್ ವಿಭಿನ್ನವಾಗಿದೆ. ಇದೊಂದು ದೃಶ್ಯಕಾವ್ಯದಂತಿದ್ದು, ಬಹುತೇಕ ದೃಶ್ಯಗಳು ಒಂದು ಕವಿತೆಯನ್ನು ಕೇಳಿದಂಥ, ಒಂದು ಕಲಾಕೃತಿ ನೋಡಿದಂಥ ಫೀಲ್ ಕೊಡುತ್ತದೆ. ಇದು ಸಿನೆಮಾದ ಬಲವೂ ಹೌದು, ಮಿತಿಯೂ ಹೌದು.


ಅಸಹಾಯಕ ನಾಯಕಿ, ಅಮಾಯಕ ನಾಯಕ…

ಸೂಜಿದಾರ ಸಿನೆಮಾ ಕಥೆ ನಡೆಯುವುದು ಚಿತ್ರದುರ್ಗದಲ್ಲಿ. ಊರಿನ ಕಾಲೊನಿಯೊಂದರಲ್ಲಿ ನಾಯಕಿ ಪದ್ಮಾ ಮನೆ ಇರುತ್ತದೆ. ಮಾಡದ ತಪ್ಪಿಗೆ ಅಂಜಿ ಓಡಿಬಂದ ಯುವಕನೊಬ್ಬ (ಶಂಕರ/ಶಬ್ಬೀರ್) ಅವಳ ಮನೆಯ ಪಕ್ಕದ ಕತ್ತಲೆ ಕೋಣೆಯಲ್ಲಿ ಆಶ್ರಯ ಪಡೆಯುತ್ತಾನೆ. ಲವ್ ಜಿಹಾದ್ ಮತ್ತು ಹುಡುಗಿಯೊಬ್ಬಳ ನಗ್ನ ವಿಡಿಯೋ ಮಾಡಿದ ಆರೋಪ ಅವನ ಮೇಲಿರುತ್ತದೆ. ಪದ್ಮಾ ಅನಿವಾರ್ಯ ಬಂಧನದಲ್ಲಿ. ಸಿಲುಕಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡವಳು. ಯುವಕ ಸ್ಥಿತಿಯೂ ಬಹುತೇಕ ಹಾಗೆಯೇ ಇರುತ್ತದೆ. ಆತನಿಗೆ ತನ್ನ ಬದುಕಿನ ವಿವರಗಳೇ ತಿಳಿದಿಲ್ಲ. ಇಂಥಾ ಅಸಹಾಯಕ

ನಾಯಕಿ – ಅಮಾಯಕ ನಾಯಕ ಪರಸ್ಪರ ಭೇಟಿಯಾದ ಮೇಲಷ್ಟೆ ತಮ್ಮ ಬದುಕನ್ನು ಕಂಡುಕೊಳ್ಳಲು ಮುಂದಾಗುತ್ತಾರೆ. ಈ ಹುಡುಕಾಟದ ಪಯಣವೇ ಚಿತ್ರದುದ್ದಕ್ಕೂ ಸಾಗುವ ಕಥಾ ಹಂದರ.


ನಾಯಕ – ನಾಯಕಿಯ ಈ ಪ್ರಯಾಣದಲ್ಲಿ ಇಡಿಯಾಗಿಯೂ ಬಿಡಿಯಾಗಿಯೂ ಜೊತೆಯಾಗುವ ಕಾಲೊನಿಯ ಪಾತ್ರಗಳು ಸೂಜಿದಾರದ ಹೊಲಿಗೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ. ಕಣ್ತುಂಬ ಕನಸು ತುಂಬಿಕೊಂಡ ಹೂಮಾರುವ ಪೆದ್ದು ಹುಡುಗಿ ರಾಜಿ, ಅವಳ ಪ್ರಿಯತಮ ಕಳ್ಳ ಬೀರನೂ ಈ ಹೊಲಿಗೆಯಲ್ಲಿ ತಮ್ಮನ್ನು ಪೋಣಿಸಿಕೊಳ್ಳುತ್ತ ಹೋಗುತ್ತಾರೆ. ರಾಮಾಯಣ ನಾಟಕದಲ್ಲಿ ನಟಿಸುತ್ತಲೇ ಮನೆಗೆ ಬಂದು ಹೆಂಡತಿಯನ್ನು ಪೀಡಿಸುವ ಕೆಟ್ಟ ಗಂಡನ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ಅಬ್ಬರಿಸಿದ್ದಾರೆ.


ಪಾತ್ರ ಪ್ರಾಮುಖ್ಯತೆಯ ದೃಷ್ಟಿಯಿಂದ ಇದೊಂದು ಮಹಿಳಾಪ್ರಧಾನ ಸಿನೆಮಾ. ಮಧ್ಯಮ ವಯಸ್ಕ ಗೃಹಿಣಿಯ ಪಾತ್ರದಲ್ಲಿ ಡೀಪ್ ಬ್ಲೌಸ್ ತೊಟ್ಟ ಹರಿಪ್ರಿಯಾ ಗ್ಲಾಮರಸ್ ಸಿಕ್ಕಾಪಟ್ಟೆ ಆಗಿ ಕಾಣುತ್ತಾರೆ. ಯಶ್ವಂತ್ ಶೆಟ್ಟಿ ದೇಹ ದೈತ್ಯಾಕಾರವಾಗಿದ್ದರೂ ಹೆದರಿದ ಸನ್ನಿವೇಶಗಳಲ್ಲಿ ಬಹಳ ಪಾಪದವರಂತೆ ಕಾಣುತ್ತಾರೆ! ಹೊಸಬರಾದರೂ ಹಲವು ಸಿನೆಮಾಗಳಲ್ಲಿ ನಟಿಸಿ ಪಳಗಿದ ಹರಿಪ್ರಿಯಾಗೆ ಸರಿಸಮವಾಗಿದೆ ಯಶ್ ನಟನೆ. ಇಲ್ಲಿ ರಂಗಭೂಮಿಯ ಅನುಭವ ಅವರ ಕೈಹಿಡಿದಿದೆ.


ನಾಯಕ ಮತ್ತು ನಾಯಕಿ ಪಾತ್ರಗಳು ಬಹುತೇಕ ಮೌನದಲ್ಲೇ ಮಾತಾಡುವುದು ಸಿನೆಮಾದ ಸೊಬಗನ್ನು ಹೆಚ್ಚಿಸಿದೆ. ಆದರೆ ಅತಿಯಾಗಿ ಮಾತಾಡುವ ರಾಜಿ ಪಾತ್ರ ಕೆಲವೆಡೆ ರೇಜಿಗೆ ಹುಟ್ಟಿಸುತ್ತವೆ. ಸಂಭಾಷಣೆಗಳು ಚೆನ್ನಾಗಿವೆಯಾದರೂ ಸಿನೆಮಾಕ್ಕೆ ಇವು ಭಾರ ಅನ್ನಿಸುತ್ತದೆ. ಆದರೂ, “ಕಾಲವೆಂಬ ಕೊನೆಯಿಲ್ಲದ ದಾರ ನಮ್ಮನ್ನೆಲ್ಲ ನೇಯುತ್ತಿದೆ….” ಅನ್ನುವ ಸಂದೇಶ ಸಿನೆಮಾ ನೋಡಿ ಹೊರಬಂದ ಮೇಲೂ ಬಹಳ ಹೊತ್ತು ಮನಸಲ್ಲಿ ಗಿರಕಿ ಹೊಡೆಯುವುದು ಸುಳ್ಳಲ್ಲ. ಅಷ್ಟರಮಟ್ಟಿಗೆ ‘ಸೂಜಿದಾರ’ ನಮ್ಮ ಭಾವಕೋಶವನ್ನು ಯಶಸ್ವಿಯಾಗಿ ತಲುಪುತ್ತದೆ.


ಬಿಡುಗಡೆಯ ಹೊಸ್ತಿಲಲ್ಲೇ ಕಾಂಟ್ರೊವರ್ಸಿ

ಸೂಜಿದಾರ, ಬಿಡುಗಡೆ ಕಂಡ ಹೊಸ್ತಿಲಲ್ಲೇ ಕಾಂಟ್ರೊವರ್ಸಿಯಿಂದ ಸದ್ದು ಮಾಡಿದ್ದ ಸಿನೆಮಾ. ಚಿತ್ರದ ನಾಯಕಿ ಪಾತ್ರದಲ್ಲಿ ನಟಿಸಿರುವ ಹರಿಪ್ರಿಯಾ, “ನನಗೆ ಹೇಳಿದ ಕಥೆಯೇ ಬೇರೆ, ತೆರೆಯ ಮೇಲೆ ತೋರಿಸಿರೋದೇ ಬೇರೆ. ನನಗೆ ಹೇಳಿದ್ದ ಕಥೆಯನ್ನೇ ಇಟ್ಟುಕೊಂಡು ಸಿನೆಮಾ ಮಾಡಿದ್ದರೆ ಖಂಡಿತ ಸಕ್ಸಸ್ ಆಗುತ್ತಿತ್ತು. ಈಗ ಸಿನೆಮಾ ಗೆಲ್ಲುವುದು ಅನುಮಾನ. ಅಭಿಮಾನಿಗಳು ನನ್ನನ್ನು ಕ್ಷಮಿಸಬೇಕು” ಎಂದು ಹೇಳಿದ್ದರು. ಅವರ ಹೇಳಿಕೆಗೆ ಇಡೀ ಚಿತ್ರ ತಂಡ ತಿರುಗಿ ಬಿದ್ದಿತ್ತು.


ಹರಿಪ್ರಿಯಾ ಹೇಳುವ ಪ್ರಕಾರ ಸಿನೆಮಾ ಕಥೆ ಅಂತಿಮಗೊಂಡಾಗ ಇಲ್ಲದಿದ್ದ ಪಾತ್ರಗಳೆಲ್ಲ ಆಮೇಲೆ ಬಂದು ಸೇರಿವೆ. ಅವುಗಳಲ್ಲಿ ಚೈತ್ರ ಕೋಟೂರು ನಟನೆಯ ರಾಜಿ ಪಾತ್ರ ಮುಖ್ಯವಾದದ್ದು. ಚೈತ್ರಾ ಕೋಟೂರು ತಮ್ಮ ಫೇಸ್ ಬುಕ್ ಪೋಸ್ಟ್ ಒಂದರಲ್ಲಿ “ಸಂಭಾಷಣೆ ಬರೆಯಲು ಹೋದ ನನ್ನ ಕಾಟ ತಡೆಯಲಾಗದೆ ನನಗೆಂದೇ ಒಂದು ಪಾತ್ರ ಸೃಷ್ಟಿಸಿಕೊಟ್ಟರು” ಎಂದು ನಿರ್ದೇಶಕ ಮೌನೇಶ್ ಬಡಿಗೇರರನ್ನು ಹಾಡಿ ಹೊಗಳಿದ್ದಾರೆ. ಇದು ಹರಿಪ್ರಿಯಾ ಆರೋಪಕ್ಕೆ

ಪುಷ್ಟಿ ನೀಡುತ್ತದೆ. ಜೊತೆಗೆ ಚೈತ್ರಾ ಇದು ತಮ್ಮದೇ ಸಿನೆಮಾ ಅನ್ನುವಂತೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಾನೇ ಇದರ ಮುಖ್ಯ ಪಾತ್ರ ಅನ್ನುವಂತೆ ಫೇಸ್ ಬುಕ್’ನಲ್ಲಿ ಬರೆಯುತ್ತಿದ್ದರು. ಬಹುಶಃ ಇದೂ ಹರಿಪ್ರಿಯಾ ಮುನಿಸಿಗೆ ಕಾರಣವಾಗಿರಬಹುದು.

ಅದೇನೇ ಇದ್ದರೂ, ಸಿನೆಮಾ ನೋಡಿ ಮುಗಿದ ಮೇಲೆ, ಹರಿಪ್ರಿಯಾ ಹೇಳಿದ್ದು ನಿಜವಿದ್ದರೂ ಇರಬಹುದು ಅನ್ನಿಸಿದರೆ, ಅದು ಪ್ರೇಕ್ಷಕರ ತಪ್ಪಲ್ಲ!


ಥಿಯೇಟರ್ ಅನುಭವ ಸಿನೆಮಾಗೆ ಪ್ಲಸ್ ಪಾಯಿಂಟ್ ಆಗಬಲ್ಲದೆ?

ನಟನೆಯ ವಿಷಯಕ್ಕೆ ಬಂದಾಗ ಸಿನೆಮಾಗೆ ರಂಗಭೂಮಿ ಚಿಮ್ಮುಹಲಗೆಯಾದರೂ ಮೇಕಿಂಗ್ ವಿಷಯದಲ್ಲಿ ಎರಡೂ ಬೇರೆಬೇರೆಯೇ. ನಾಟಕ ನಿರ್ದೇಶನದಲ್ಲಿ ಯಶಸ್ವಿಯಾದವರಿಗೆ ಸಿನೆಮಾ ನಿರ್ದೇಶನ ಸುಲಭದ ಮಾತಲ್ಲ. ರಂಗಭೂಮಿಯಲ್ಲಿ ಸಂಭಾಷಣೆ, ಪ್ರಸಾಧನ ಮತ್ತು ತಂತ್ರಗಾರಿಕೆಯಷ್ಟೆ ಮುಖ್ಯವಾದರೆ, ಸಿನೆಮಾದಲ್ಲಿ ನಿರ್ದೇಶಕರು ದೃಶ್ಯಗಳನ್ನು ಚೌಕಟ್ಟುಗಳಲ್ಲಿ ಹೇಗೆ ಕೂರಿಸುತ್ತಾರೆ ಮತ್ತು ಅವನ್ನು ಹೇಗೆ ಒಂದು ಕಥೆಯಾಗಿ ಕಟ್ಟಿಕೊಡುತ್ತಾರೆ ಅನ್ನುವುದು ಬಹಳ ಮುಖ್ಯವಾಗುತ್ತದೆ.

ಇಲ್ಲಿ ಪರದೆಯ ಹಿಂದೆ ಮಾಡಬೇಕಾದ ಕೆಲಸಗಳೇ ಅಗಾಧ. ಜೊತೆಗೆ, ನಿರೂಪಣೆಯ ಹರಿವು ಸರಾಗವಾಗಿದ್ದರಷ್ಟೆ ಸಿನೆಮಾ ಪ್ರೇಕ್ಷಕರ ಮೆಚ್ಚುಗೆ ಗಳಿಸಬಲ್ಲದು. ನಿರ್ದೇಶಕ ಮೌನೇಶ್ ಬಡಿಗೇರ್ ಇಲ್ಲಿ ಸೋತಿದ್ದಾರೆ ಅನ್ನಿಸುತ್ತದೆ.

ಶುರುವಲ್ಲಿ ಚುರುಕಾಗಿ ಸಾಗುವ ‘ಸೂಜಿದಾರ’, ಕ್ರಮೇಣ ತೆವಳುತ್ತಾ ಬೋರ್ ಹೊಡೆಸುತ್ತದೆ. ಮತ್ತೆ ಕೆಲವೆಡೆ ಬುಡದಲ್ಲಿ ಗಂಟು ಹಾಕದೆ ಪೋಣಿಸಿದ ದಾರದಿಂದ ಸೂಜಿ ಕಳಚುವಂತೆ ದೃಶ್ಯಗಳ ನಡುವೆ ಕೊಂಡಿ ಕಳಚಿ ತಲೆ ಕೆರೆದುಕೊಳ್ಳುವಂತೆ ಮಾಡುತ್ತದೆ.


ಈ ಕೊರತೆಗಳೆಲ್ಲ ಏನೇ ಇದ್ದರೂ ರಂಗಭೂಮಿಯ ಗೆಳೆಯರು ಮತ್ತು ಯುವ ಉತ್ಸಾಹಿ ತಂಡ ಜೊತೆಯಾಗಿ ಒಂದು ಭಿನ್ನ ಪ್ರಯತ್ನಕ್ಕೆ ಕೈಹಾಕಿರುವುದು ಅಭಿನಂದನಾರ್ಹ. ಸಮಕಾಲೀನ ಸಾಮಾಜಿಕ ಹಾಗೂ ರಾಜಕೀಯ ಸನ್ನಿವೇಶಗಳನ್ನು ಹದವಾಗಿ ಹೆಣೆಯುತ್ತಾ ಒಂದು ರೊಮ್ಯಾಂಟಿಕ್ ಥ್ರಿಲ್ಲರ್ ಕಟ್ಟಿಕೊಟ್ಟಿದೆ ಚಿತ್ರ ತಂಡ.


ಅಂದಹಾಗೆ, ಇದು ಎಚ್.ಬಿ.ಇಂದ್ರಕುಮಾರ್ ಅವರ ಸಣ್ಣ ಕಥೆಯನ್ನು ಆಧರಿಸಿದ ಸಿನೆಮಾ. ಅಶೋಕ್ ವಿ ರಾಮನ್ ಛಾಯಾಗ್ರಹಣ ಮತ್ತು ಭಿನ್ನಷಡ್ಜ ಸಂಗೀತ ಈ ಚಿತ್ರದ ಪ್ಲಸ್ ಪಾಯಿಂಟ್. ಕವಿ, ಕಥೆಗಾರ ವಿಕ್ರಮ್ ಹತ್ವಾರ್ ಈ ಸಿನೆಮಾಗೆಂದೇ ಒಂದು ಹಾಡು ಬರೆದಿದ್ದು, ಎಲ್ಲ ಐದು ಹಾಡುಗಳೂ ಗುನುಗಿಕೊಳ್ಳುವಂತಿದೆ. ಅಭಿಜಿತ್ ಕೋಟೆಕಾರ್ ಮತ್ತು ಸುಚೇಂದ್ರನಾಥ ನಾಯಕ್ ಈ ಸಿನೆಮಗೆ ಹಣ ಹೂಡಿದವರು. ಮೌನೇಶ್ ಬಡಿಗೇರರಂತೆ ನಿರ್ಮಾಪಕರಿಗೂ ಇದು ಚೊಚ್ಚಲ ಸಿನೆಮಾ. ಕಡಿಮೆ ಬಜೆಟ್’ನಲ್ಲಿ ಅಚ್ಚುಕಟ್ಟಾದ ಚಲನಚಿತ್ರ ಕಟ್ಟಿಕೊಟ್ಟ ಶ್ರೇಯ ಇವರಿಗೆ ಸಲ್ಲುತ್ತದೆ.


మరింత సమాచారం తెలుసుకోండి: