ಕಲಬುರಗಿ:  ಬಳ್ಳಾರಿ ಜಿಲ್ಲೆಯನ್ನು ಬಳ್ಳಾರಿ ಹಾಗೂ ವಿಜಯನಗರ ಎಂದು ಎರಡು ಜಿಲ್ಲೆ ರಚಿಸುವ ಮನವಿ ಸರ್ಕಾರದ ಮುಂದಿದ್ದು, ಪರಿಶೀಲನೆ ನಡೆಯುತ್ತಿದೆ ಎಂದು ರಾಜ್ಯ ಗೃಹಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕಲುಬುರಗಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬೊಮ್ಮಾಯಿ, ವಿಜಯನಗರ ಎಂಬ ಹೊಸ ಜಿಲ್ಲೆಯನ್ನು ಈಗಾಗಲೇ ರಚನೆ  ಮಾಡಿಲ್ಲ. ವಿಜಯನಗರ ಜಿಲ್ಲೆ ರಚಿಸುವ ಕುರಿತಾದ ಪ್ರಸ್ತಾಪ ಇನ್ನು ಸರ್ಕಾರದ ಮುಂದಿದ್ದು, ಪರಿಶೀಲನೆ ನಡೆಯುತ್ತಿದೆ. ಈ ವಿಚಾರ ಕುರಿತು ಸಂಸದೀಯ ಸಭೆಯಲ್ಲಿ  ಚರ್ಚೆಗೆ ಬರುವ ಕುರಿತಾದ ಯಾವುದೇ ಮಾಹಿತಿ ಇಲ್ಲ ಎಂದರು. 


ವಿಜಯನಗರ ಜಿಲ್ಲೆ ರಚನೆಯಾದರೆ 371 ಜೆ ಅಡಿಯಲ್ಲೇ ಸೇರ್ಪಡೆಗೊಳಿಸಲಾಗುವುದು. 371 ಜೆ ಅಡಿಯಲ್ಲಿ ದೊರೆಯುವ ಅನುಕೂಲಗಳಿಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು. 
ಚುನಾವಣೆಯಲ್ಲಿ ಜೆಡಿಎಸ್​ ಮತ್ತು ದೇವೇಗೌಡರಿಗೆ ತೀವ್ರ ಹಿನ್ನಡೆಯಾಗಿದೆ. ಅವರು ಹಿರಿಯರಾಗಿದ್ದು, ಅವರ ಬಗ್ಗೆ ಏನೂ ಹೇಳಕ್ಕೆ ಹೋಗುವುದಿಲ್ಲ ಎಂದೂ ಸಹ ಹೇಳಿದರು. ರಾಜ್ಯ ಬರ ಪರಿಹಾರ ಕುರಿತು ಕಾಂಗ್ರೆಸ್ ಮತ್ತು ಜೆಡಿಎಸ್​ ಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿದ ಬೊಮ್ಮಾಯಿ, ನೆರೆ ಪರಿಹಾರ ದೊರೆತ ಮೇಲೆ ಆಡಿಕೊಳ್ಳುವವರಿಗೆ ಉತ್ತರ ದೊರೆಯಲಿದೆ.


ನೆರೆ ಪರಿಹಾರ ಘೋಷಿಸುವ ಅಧಿಕಾರ ಕೇಂದ್ರ ಗೃಹಸಚಿವರಿಗೆ ಇದ್ದು, ಅಮಿತ್ ಷಾ ಅವರೊಂದಿಗೆ ಸುದೀರ್ಘವಾಗಿ 25 ನಿಮಿಷ ನೆರೆ ಪರಿಹಾರ ಕುರಿತು ಮಾತನಾಡಿದ್ದೇವೆ. ಮನೆ ಹಾಗೂ ಬೆಳೆ ಹಾನಿಗಳ ಸಂಪೂರ್ಣ ವರದಿಯನ್ನು ಸಹ ಸಲ್ಲಿಸಿದ್ದೇವೆ. ಆದಷ್ಟು ಬೇಗ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು. ಯಡಿಯೂರಪ್ಪ ದುರ್ಬಲ ಮುಖ್ಯಮಂತ್ರಿ ಎಂದು ಕಾಂಗ್ರೆಸ್​​ನವರು ಟೀಕಿಸುತ್ತಿದ್ದಾರೆ. ಇಂದಿರಾ ಗಾಂಧಿ ಕಾಲದಲ್ಲಿ ಕಾಂಗ್ರೆಸ್ ಹೈಕಮಾಂಡ್​ಗೆ ರಾಜ್ಯದವರು ಹೇಗೆ ತಲೆ ಬಾಗುತ್ತಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ ಎಂದು ರಾಜ್ಯ ಕಾಂಗ್ರೆಸ್​ ನಾಯಕರಿಗೆ ಬೊಮ್ಮಾಯಿ ಕುಟುಕಿದ್ದಾರೆ. ಪ್ರವಾಹ ಮತ್ತು ಬರದ ಪರಿಹಾರ ಕೇಂದ್ರದಿಂದ ಶೀಘ್ರವಾಗಿ ರಾಜ್ಯಕ್ಕೆ ನೀಡಲಾಗುವುದು ಎಂದು ಭರವಸೆ ನೀಡಿದರು. 


మరింత సమాచారం తెలుసుకోండి: