ಬೆಂಗಳೂರು: ಚಳಿಗಾಲದ ಅಧಿವೇಶನ ನಿನ್ನೆ ತಾನೆ ಶುರುವಾಗಿದೆ. ಕೊನೆ ಕ್ಷಣದವರೆಗೂ ಕೈಪಾಳಯದ ನಾಯಕ ಯಾರಾಗುತ್ತಾರೆ ಎಂಬ ಸಸ್ಪೆನ್ಸ್ ಗೆ ಕೊನೆಗೆ ಕೈ ಹೈಕಮಾಂಡ್ ಮಾಜಿ ಸಿ ಎಂ ಸಿದ್ದರಾಮಯ್ಯ ಅವರನ್ನು ನೇಮಿಸಿ, ಆದೇಶ ಹೊರಡಿಸಿತು. ಆದ್ದರಿಂದ ಸಿದ್ದು ಮೊದಲ ದಿನವೇ ಭರ್ಜರಿಯಾಗಿ ಗುಡುಗಿದ್ದಾರೆ. ಹಾಸ್ಯ ಪಟಾಕಿ ಜೊತೆಗೆ ಬಿಜೆಪಿಯನ್ನು ನೆರೆ ಪರಿಹಾರವೆಲ್ಲಿ ಎಂದು ಖಡಕ್ ಆಗಿ ಪ್ರಶ್ನಿಸಿದ್ದಾರೆ. 


ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರದಲ್ಲಿ ಸಚಿವ ಆರ್.ಅಶೋಕ್ ಅವರಿಗೆ ಹಿಂಬಡ್ತಿ ಭಾಗ್ಯ ಸಿಕ್ಕಿದೆ ಎಂದು ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಲೆಳೆದಿದ್ದಾರೆ. ವಿಧಾನಸಭಾ ಕಲಾಪದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸಚಿವ ಆರ್.ಅಶೋಕ್ ಅವರು ಡೆಪ್ಯೂಟಿ ಸಿಎಂ ಆಗಲಿಲ್ಲ. ನೀವು ಡಿಸಿಎಂ ಆಗಬೇಕಿತ್ತು ಎಂದು ಕಾಲೆಳೆದರು. ತಕ್ಷಣವೇ ಎದ್ದು ನಿಂತ ಆರ್.ಅಶೋಕ್, ನಾನೇ ಬೇಡ ಅಂದೆ ಬಿಡಿ ಸಾರ್ ಎಂದರು. ಆಗ ಸಿದ್ದರಾಮಯ್ಯ ಅವರು, ನೋಡಿ ನಿಮಗೆ ಪಕ್ಷ ಹಿಂಬಡ್ತಿ ಭಾಗ್ಯ ಕೊಟ್ಟಿಗೆ ಎಂದಾಗ ಕಲಾಪ ನಗೆಗಡಲಲ್ಲಿ ತೇಲಿತು.


ಪಾಪ ಅಶೋಕ್‍ಗೆ ಡಿಸಿಎಂ ಸ್ಥಾನ ಇಲ್ಲ. ಕೆ.ಎಸ್.ಈಶ್ವರಪ್ಪ ಹಾಗೂ ಜಗದೀಶ್ ಶೆಟ್ಟರ್ ಅವರಿಗೂ ಉಪಮುಖ್ಯಮಂತ್ರಿ ಸ್ಥಾನ ಇಲ್ಲ. ಈಗ ಮಂತ್ರಿ ಆದವರಿಗೆ ಹಾಗೂ ಶಾಸಕರಲ್ಲದವರಿಗೆ ಡಿಸಿಎಂ ಸ್ಥಾನ ಕೊಟ್ಟಿದ್ದಾರೆ ಎಂದು ಉಪ ಮುಖ್ಯಮಂತ್ರಿಗಳಾದ ಅಶ್ವಥ್ ನಾರಾಯಣ ಹಾಗೂ ಲಕ್ಷ್ಮಣ ಸವದಿ ಅವರನ್ನು ಪರೋಕ್ಷವಾಗಿ ಕುಟುಕಿದರು. ಪ್ರಧಾನಿ ನರೇಂದ್ರ ಮೋದಿಗೆ ತಾಯಿ ಹೃದಯ ಬೇಕಲ್ಲ? ರಾಜ್ಯಕ್ಕೆ ಬರುವಂತೆ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡುತ್ತೇನೆ ಹಾಗೂ ನೆರೆ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸರ್ವೆ ಮಾಡಿ ಹಾನಿ ವೀಕ್ಷಣೆ ಮಾಡಲಿ ಎಂದು ಒತ್ತಾಯಿಸಿದರು.


ರಾಜ್ಯದಲ್ಲಿ ಹಿಂದೆಂದು ಕೇಳರಿಯದ ಪ್ರವಾಹ ಎದುರಾಗಿದೆ. ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಕೂಡಲೇ 5000 ಕೋಟಿ ರೂ. ಬಿಡುಗಡೆ ಮಾಡಬೇಕು. ಮಹಾ ಮಳೆ ಹಾಗೂ ಪ್ರವಾಹದಿಂದಾಗಿ ಎಂಟು ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಪ್ರವಾಹ ಉಂಟಾಗಿ 60ದಿನ ಕಳೆದಿದೆ. ಅಲ್ಲಿನ ಸೇತುವೆಯನ್ನು ಪುನರ್ ನಿರ್ಮಾಣವಾಗಿಲ್ಲ. ಇದು ಸರ್ಕಾರದ ವೈಫಲ್ಯವನ್ನು ತೋರುತ್ತದೆ ಎಂದು ವಾಗ್ದಾಳಿ ನಡೆಸಿದರು.


మరింత సమాచారం తెలుసుకోండి: