ನವದೆಹಲಿ: ರಾಷ್ಟ್ರ ರಾಜಕೀಯದಲ್ಲಿ ಇದೊಂದು ಹೇಳಿಕೆ ಇದೀಗ ಭಾರೀ ಸದ್ದು ಮಾಡಲು ಶುರು ಮಾಡಿದೆ. ಮಾಜಿ ಎಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿ ಗೆ ಇನ್ನೂ ರಾಜಕೀಯ ಜ್ಞಾನ ಬಂದಿಲ್ಲ, ಅವರಿನ್ನು  ಅಪ್ರಬುದ್ಧರು ಎನ್ನುವ ಹೇಳಿಕೆ ಇದೀಗ ಎಲ್ಲೆಡೆ ವೈರಲ್ ಆಗಿದೆ. ಅವರ ಆತ್ಮೀಯರೇ ಈ ಹೇಳಿಕೆ ನೀಡಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಯಾರು ಈ ರೀತಿ ಹೇಳಿದ್ದು, ಅವರು ಹೇಳಿದ್ದಾದರೂ ಏನು ಎಂಬುದನ್ನು ಮುಂದೆ ಓದಿ. 


ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 2004ರಲ್ಲಿಯೇ ರಾಜಕೀಯಕ್ಕೆ ಸೇರಿದ್ದರೂ ಕೂಡ ಇನ್ನೂ ತರಬೇತಿ ಹಂತದಲ್ಲಿಯೇ ಇದ್ದಾರೆ ಅವರಿನ್ನು ಅಪ್ರಬುದ್ಧರು ಎಂದು ಅವರ ಮಾಜಿ ಸಹಚರ ಪಂಕಜ್ ಶಂಕರ್ ಹೇಳಿ ಸುದ್ದಿಯಾಗಿದ್ದಾರೆ. ಐಎಎನ್ ಎಸ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ರಾಹುಲ್ ಗಾಂಧಿಯವರ ಕೊಡುಗೆ ಏನೂ ಇಲ್ಲ. ಅವರು ಪಕ್ಷವನ್ನು ಮತ್ತು ಯುವ ಸಂಘಟನೆಯನ್ನು ನಾಶ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು. ರಾಜಕೀಯದಲ್ಲಿ ರಾಹುಲ್ ಗಾಂಧಿ ಕೊಡುಗೆಯೇನಿದೆ? ಅವರ ನಾಯಕತ್ವದಡಿ ಲೋಕಸಭೆ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ ಎರಡು ಅಂಕೆಗಳಿಗೆ ಇಳಿಯಿತು ಎಂದರು. ಪಂಕಜ್ ಶಂಕರ್ ರಾಹುಲ್ ಗಾಂಧಿಯವರ ಮಾಧ್ಯಮ ಸಲಹೆಗಾರರಾಗಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದರು.


ನಾನು ರಾಹುಲ್ ಗಾಂಧಿಯವರನ್ನು ವಿರೋಧಿಸಿ ಈ ಮಾತು ಹೇಳುತ್ತಿಲ್ಲ. ಅವರ ಮೇಲೆ ನನಗೆ ಯಾವುದೇ ವೈಯಕ್ತಿಕ ಸಿಟ್ಟು, ಭಿನ್ನಾಭಿಪ್ರಾಯಗಳಿಲ್ಲ. ಅವರು ಪಕ್ಷವನ್ನು ಮುನ್ನಡೆಸುವಷ್ಟು ಪ್ರಬುದ್ಧರಾಗಿದ್ದಾರೆ ಎಂದು ನನಗೆ ಅನಿಸುವುದಿಲ್ಲ ಎಂದರು.
ಕಾಂಗ್ರೆಸ್ ನಲ್ಲಿ ನಿಜವಾಗಿಯೂ ನಾಯಕತ್ವದ ಕೊರತೆಯಿಲ್ಲ. ರಾಹುಲ್ ಗಾಂಧಿಗಿಂತ ಪ್ರಿಯಾಂಕಾ ಗಾಂಧಿ ವಾದ್ರಾ ಹೆಚ್ಚು ಸಮರ್ಥರಾಗಿದ್ದಾರೆ. ರಾಹುಲ್ ಗಾಂಧಿಯವರನ್ನು ಅಮೇಥಿಗೆ ಕರೆದುಕೊಂಡು ಹೋಗಿದ್ದೇ ಪ್ರಿಯಾಂಕಾ ಎಂದರು.
ಹಿಂದಿನ ಯುಪಿಎ ಸರ್ಕಾರದಲ್ಲಿ ಪಂಕಜ್ ಶಂಕರ್ ದೂರದರ್ಶನದಲ್ಲಿ ಸಲಹಗಾರರಾಗಿದ್ದರು ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದಲ್ಲಿ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ರಾಹುಲ್ ಗಾಂಧಿ ರಾಜಕೀಯದಲ್ಲಿ ಇನ್ನು ಪಳಗಬೇಕು, ಅನುಭವಿಗಳ ಸಲಹೆ ಪಡೆಯಬೇಕು ಎಂಬುದು ಕೆಲವು ತಜ್ಞರು ಹೇಳಿದ್ದರು. ಇದೀಗ ಪಂಕಜ್ ಶಂಕರ್ ಕೂಡ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. 




మరింత సమాచారం తెలుసుకోండి: