ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯಿದೆ ಸಿಎಎ ಹಾಗೂ ಪೌರತ್ವ ನೋಂದಣಿ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಲು ಕಾಂಗ್ರೆಸ್‌ ನಿರ್ಧರಿಸಿದೆ. 
 
ಸಿಎಎ ಹಾಗೂ ಎನ್‌ಆರ್‌ಸಿ ಕುರಿತು ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಾಗಾರದಲ್ಲಿ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ನಿರ್ಣಯ ಕೈಗೊಳ್ಳಲಾಯಿತು. ಸಿಎಎ ಹಾಗೂ ಎನ್‌. ಆರ್‌. ಸಿ ಯನ್ನು ವಾಪಸ್‌ ಪಡೆಯುವಂತೆ ಕಾಂಗ್ರೆಸ್‌ ಪಕ್ಷದಿಂದಲೇ ಹೋರಾಟ ರೂಪಿಸುವುದು. ನಾವೇನು ಕೈಕಟ್ಟಿ ಕುಳಿತಿಲ್ಲ, ದರ್ಮಾಧಾರಿತ ರಾಷ್ಟ್ರವನ್ನಾಗಿ ಮಾಡಲು ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ. 
 
 ತಜ್ಞರು, ವಿದ್ಯಾರ್ಥಿಗಳು ಹಾಗೂ ಪ್ರಗತಿಪರರ ಜೊತೆ ಸಭೆಗಳನ್ನು ನಡೆಸಿ ಎಲ್ಲರೂ ಹೋರಾಟದಲ್ಲಿ ಸಕ್ರೀಯರಾಗಿ ಪಾಲ್ಗೊಳ್ಳುವಂತೆ ಮಾಡುವುದು ಹಾಗೂ ಸಿಎಎ ಕುರಿತು ಸುಪ್ರೀಂ ಕೋರ್ಟ್‌ ಮುಂದಿರುವ ಪ್ರಕರಣವನ್ನು ಆದಷ್ಟು ಬೇಗ ಇತ್ಯರ್ಥ ಪಡಿಸುವಂತೆ ಆಗ್ರಹಿಸುವ ನಿರ್ಣಯ ಕೈಗೊಳ್ಳಲಾಯಿತು. ಪೌರತ್ವ ಕಾಯಿದೆ ಹಾಗೂ ರಾಷ್ಟ್ರೀಯ ನಾಗರೀಕ ನೋಂದಣಿ ಯೋಜನೆ ಗಳನ್ನು ಅನುಷ್ಠಾನಗೊಳಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಇಡೀ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಈ ಹೋರಾಟವನ್ನು ಬೆಂಬಲಿಸಿ ಕಾಯಿದೆಗಳ ನಕಾರಾತ್ಮಕ ಅಂಶಗಳ ಬಗ್ಗೆ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಜನಜಾಗೃತಿಗೊಳಿಸಲು ತಾಲೂಕು, ಜಿಲ್ಲಾ ಮಟ್ಟದ ಪಕ್ಷದ ಕಾರ್ಯಕರ್ತರಿಗೆ ತಿಳುವಳಿಕೆ ಮೂಡಿಸಲು ಕೆಪಿಸಿಸಿ ಮೇಲ್ಮನೆ ಸದಸ್ಯರು, ಕೆಪಿಸಿಸಿಯ ಮಾಜಿ ಪದಾಧಿಕಾರಿಗಳು, ವಕ್ತಾರರು ಹಾಗೂ ಜಿಲ್ಲಾ ಮುಖಂಡರಿಗೆ ತಜ್ಞರ ಮಾಹಿತಿ ನೀಡಲಾಗುವುದು ಎಂದಿದ್ದಾರೆ. 
 
ಆರ್‌ಎಸ್‌ಎಸ್‌ನವರು ಜಾತ್ಯತೀತ ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಉದ್ದೇಶ ಇಟ್ಟುಕೊಂಡಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಭಾರತವನ್ನು ಧರ್ಮಾಧಾರಿತ ಹಿಂದೂ ರಾಷ್ಟ್ರ ಮಾಡಲು ಬಿಡುವುದಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಾಮಿ ವಿವೇಕಾನಂದ, ಮಹಾತ್ಮಾ ಗಾಂಧಿ, ರವೀಂದ್ರನಾಥ ಟ್ಯಾಗೋರ್‌ ಭಾರತವನ್ನು ಧರ್ಮದ ಆಧಾರದಲ್ಲಿ ಕಟ್ಟುವುದನ್ನು ವಿರೋಧಿಸಿದ್ದರು. ನಾವು ಇದನ್ನು ತೀವ್ರವಾಗಿ ಖಂಡಿಸುತ್ತೇವೆ, ಯಾವುದೇ ಕಾರಣಕ್ಕೂ ಸಿಎಎ , ಎನ್.ಆರ್.ಸಿ ಯನ್ನು ಒಪ್ಪುವುದಿಲ್ಲ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.
 
 

మరింత సమాచారం తెలుసుకోండి: