ಬೀದರ್: ಈ ಬಾರಿಯ ರಾಜ್ಯ ಬಜೆಟ್‌ ನಲ್ಲಿ ಕೃಷಿ ಮತ್ತು ಪಶು ಸಂಗೋಪನೆಗೆ ಹೆಚ್ಚು ಆದ್ಯತೆ ನೀಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಹೌದು, ಮುಖ್ಯಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಹಸಿರು ಶಾಲು ಹೊದ್ದು ರೈತರಿಗೆ ಆದ್ಯತೆ ಎಂಬುದನ್ನು ಸಾರಿದ್ದರು. ಇದೀಗ ಬಜೆಟ್ ನಲ್ಲಿಯೂ ಕೃಷಿಗೆ ಆದ್ಯತೆ ಎಂಬುದಾಗಿ ಹೇಳಿದ್ದಾರೆ. 
 
ಬೀದರ್ ನ ಹೊರವಲಯದ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಆವರಣದಲ್ಲಿ ಶುಕ್ರವಾರ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಏರ್ಪಡಿಸಿರುವ ಮೂರು ದಿನಗಳ ರಾಜ್ಯ ಪಶು ಮೇಳ ಉದ್ಘಾಟಿಸಿ ಮಾತನಾಡಿದ ಅವರು, ರೈತರ ಜೀವನ ಮಟ್ಟ ಸುಧಾರಿಸುವಲ್ಲಿ ಸರ್ಕಾರ ಕಟಿ ಬದ್ಧವಾಗಿದೆ. ಈ ದಿಸೆಯಲ್ಲಿ ಹಾಲಿಗೆ ಪ್ರೋತ್ಸಾಹ ಧನ ಸೇರಿದಂತೆ ವಿವಿಧ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ ಎಂದರು. ದೇಶದ ಜಿಡಿಪಿಗೆ ಕೃಷಿ ಮತ್ತು ಹೈನುಗಾರಿಕೆ ಉತ್ತಮ ಕೊಡುಗೆ ನೀಡುತ್ತಿದೆ. ಹವಾಮಾನ ವೈಪರೀತ್ಯದಿಂದ ತತ್ತರಿಸುವ ರೈತ ಬಾಂಧವರಿಗೆ ಆರ್ಥಿಕ ಶಕ್ತಿ ತುಂಬುವಲ್ಲಿ ಪಶು ಸಂಗೋಪನೆ ಮಹತ್ತರ ಪಾತ್ರ ವಹಿಸುತ್ತಿದೆ ಎಂದು ಹೇಳಿದ ಸಿಎಂ ಯಡಿಯೂರಪ್ಪ, ಪಶು ಪಾಲನೆಯಿಂದ ಹೆಚ್ಚು ಲಾಭ ಗಳಿಸುವ ಅವಕಾಶ ಇರುವುದರಿಂದ ರೈತರು ಕೃಷಿ ಜತೆಗೆ ಹೈನುಗಾರಿಕೆಯನ್ನು ಉಪಕಸುಬನ್ನಾಗಿ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. 
 
ದೇಶದಲ್ಲಿ ರಾಜಸ್ಥಾನ ಬಳಿಕ ಹೆಚ್ಚು ಒಣಭೂಮಿ ಹೊಂದಿರುವ ರಾಜ್ಯ ಕರ್ನಾಟಕ. ಬೇಸಿಗೆ ಸಂದರ್ಭದಲ್ಲಿ ನೀರಿನ ಸಮಸ್ಯೆಯಿಂದ ರೈತರು ತಮ್ಮ ಜಾನುವಾರುಗಳನ್ನು ಮಾರಾಟ ಮಾಡುತ್ತಾರೆ. ಇದನ್ನು ತಡೆಗಟ್ಟಿ, ಜಾನುವಾರು ಸಂಪತ್ತು ಕಾಪಾಡಲು ಸರ್ಕಾರ ಮೇವು ಭದ್ರತಾ ಕೇಂದ್ರಗಳನ್ನು ಈಗಾಗಲೇ ಆರಂಭಿಸಿದೆ. ಕೃಷಿ ಮತ್ತು ಪಶು ಸಂಗೋಪನೆಯಲ್ಲಿ ಹೆಚ್ಚಿನ ಆದಾಯ ಪಡೆಯಲು ಅನುಕೂಲವಾಗುವಂತೆ ಪಶು ವಿಶ್ವವಿದ್ಯಾಲಯದ ಸಂಶೋಧನಾ ಸಂಸ್ಥೆಗಳಲ್ಲಿ ಕೈಗೊಳ್ಳುವ ಅವಿಷ್ಕಾರಗಳನ್ನು ಮೇಳದ ಮೂಲಕ ಪರಿಚಯ ಮತ್ತು ಜಾಗೃತಿ ಮೂಡಿಸಲು ಇಂಥ ಮೇಳಗಳನ್ನು ಆಯೋಜಿಸಲಾಗುತ್ತಿದ್ದು, ರೈತರು ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

మరింత సమాచారం తెలుసుకోండి: