ಕೊರೋನಾ ವೈರಸ್ ಇಂದ ದೇಶದ ಜನರನ್ನು ರಕ್ಷಿಸುವ  ಉದ್ದೇಶದಿಂದ ಇಡೀ ದೇಶವನ್ನು ಮೇ.3ರರವರೆಗೆ ಲಾಕ್ ಡೌನ್ ಮಾಡಲು ಆದೇಶವನ್ನು ಮಾಡಲಾಗಿತ್ತು.  ಲಾಕ್ ಡೌನ್ ನಿಂದ ಹೊರ ಬರುವ ಸಮಯ ಸಮೀಪಿಸುತ್ತಿರುವುದರಿಂದ ಲಾಕ್ ಡೌನ್  ಅನ್ನು ಹಂತ ಹಂತವಾಗಿ ಸಡಿಲಗೊಳಿಸುವ ಬಗ್ಗೆ ಚಿಂತನೆಯನ್ನು ಮಾಡಲಾಗಿದ್ದು. ಇಂದು ಮಧ್ಯರಾತ್ರಿ 12 ರಿಂದ ಲಾಕ್ ಡೌನ್ ಸಡಿಲಿಕೆಗೆ ಅನುಮೋಧನೆಯನ್ನು ನೀಡಲಾಗಿದೆ. ಅಷ್ಟಕ್ಕೂ ಈ ಸಡಿಲಿಕೆಯಿಂದ ಯಾರಿಗೆ ಅನುಕೂಲವಾಗಲಿದೆ ಗೊತ್ತಾ..?

 

 ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ತಡೆಗಟ್ಟುವ ದೃಷ್ಟಿಯಿಂದ ಹೇರಿರುವ ಲಾಕ್‍ಡೌನ್ ಅನ್ನು ಹಂತ-ಹಂತವಾಗಿ ಸಡಿಲಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಹೊಸ ಮಾರ್ಗಸೂಚಿ ಪ್ರಕಟಿಸಿ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಆದೇಶ ಹೊರಡಿಸಿದ್ದಾರೆ.

 

ಹೊಸ ಮಾರ್ಗಸೂಚಿಯನ್ವಯ ಮಧ್ಯರಾತ್ರಿಯಿಂದ ಕೊರೋನ ವೈರಸ್ ಸೋಂಕಿತರು ಇಲ್ಲದ ಪ್ರದೇಶದಲ್ಲಿ ಲಾಕ್‍ಡೌನ್ ಕೊಂಚ ಸಡಿಲಗೊಳ್ಳಲಿದ್ದು, ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಕಂಟೈನ್ಮೆಂಟ್ ವಲಯ (ಸೋಂಕು ಪತ್ತೆಯಾದ ಸ್ಥಳ) ದಲ್ಲಿ ಸೀಲ್‍ಡೌನ್ ಸಹಿತ ಲಾಕ್‍ಡೌನ್ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

 

ಐಟಿ-ಬಿಟಿ ವಲಯದಲ್ಲಿ ಶೇ.33ರಷ್ಟು ಉದ್ಯೋಗಿಗಳೊಂದಿಗೆ ಕೆಲಸ ಆರಂಭಿಸಬಹುದು. ಆರೋಗ್ಯ, ಕೃಷಿ ಮತ್ತು ತೋಟಗಾರಿಕೆ, ಮೀನುಗಾರಿಕೆ, ಹಣ್ಣು-ತರಕಾರಿ ಪೂರೈಕೆ ಹಾಗೂ ಮಾರಾಟ ಸೇರಿದಂತೆ ಅಗತ್ಯ ಸೇವೆಗಳಿಗೆ ಲಾಕ್‍ಡೌನ್‍ನಿಂದ ವಿನಾಯಿತಿ ನೀಡಲಾಗಿದೆ. ಆದರೆ, ಸ್ಥಳೀಯ ಹಾಗೂ ಅಂತರಾಷ್ಟ್ರೀಯ ಪ್ರಯಾಣಿಕರ ವಿಮಾನಗಳ ಹಾರಾಟ, ಭದ್ರತೆ ದೃಷ್ಟಿಯಿಂದ ಹೊರತುಪಡಿಸಿ ಪ್ರಯಾಣಿಕ ರೈಲುಗಳ ಸಂಚಾರ ರದ್ದುಪಡಿಸಲಾಗಿದೆ.

 

ಅಂತರ ಜಿಲ್ಲಾ ಹಾಗೂ ಅಂತರ ರಾಜ್ಯ ಸಂಚಾರ (ವೈದ್ಯಕೀಯ ಕಾರಣಗಳನ್ನು ಹೊರತುಪಡಿಸಿ) ನಿಷೇಧಿಸಲಾಗಿದೆ. ಕೆಎಸ್ಸಾರ್ಟಿಸಿ, ಬಿಎಂಟಿಸಿ, ಮೇಟ್ರೋ, ಟ್ಯಾಕ್ಸಿ, ಆಟೋರಿಕ್ಷಾ ಸೇರಿದಂತೆ ಇತರೆ ಸಾರಿಗೆ ಸೇವೆ ಆರಂಭಕ್ಕೆ ಯಾವುದೇ ರೀತಿಯ ಅವಕಾಶ ನೀಡಿಲ್ಲ. ಮೇಲ್ಕಂಡ ಸೇವೆಗಳಿಗೆ ಮೇ 3ರ ವರೆಗೆ ನಿರ್ಬಂಧ ಮುಂದುವರಿಯಲಿದೆ.

 

ಮೇ 3ರ ವರೆಗೆ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ. ಶಾಪಿಂಗ್ ಮಾಲ್‍ಗಳು, ಚಿತ್ರಮಂದಿರಗಳು, ಶಾಲಾ-ಕಾಲೇಜುಗಳು ಸೇರಿದಂತೆ ಹೆಚ್ಚಿನ ಜನಸಂದಣಿ ಪ್ರದೇಶಗಳ ಚಟುವಟಿಕೆಗಳಿಗೆ ನಿರ್ಬಂಧ ಮುಂದುವರಿಯಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

 

ನಿರ್ಮಾಣ ಕಾರ್ಯ, ಬಿತ್ತನೆ ಬೀಜ, ರಸಗೊಬ್ಬರ, ಔಷಧ ಮಾರಾಟ, ಸ್ವಯಂ ಉದ್ಯೋಗದ ಶಾಪ್, ಮೋಟಾರ್ ಬೈಕ್, ಕಾರು ರಿಪೇರಿ, ಸಂಸ್ಕರಣಾ, ಪ್ಯಾಕೇಜಿಂಗ್ ಘಟಕಗಳು, ಆನ್‍ಲೈನ್ ಸೇವೆ, ಕೃಷಿ ಉತ್ಪನ್ನ ಮಾರುಕಟ್ಟೆ(ಎಪಿಎಂಸಿ) ವಹಿವಾಟಿಗೆ ಷರತ್ತು ಬದ್ಧ ಅವಕಾಶ ಕಲ್ಪಿಸುವ ಮೂಲಕ ಸುದೀರ್ಘ ಅವಧಿಯ ಲಾಕ್‍ಡೌನ್ ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ಕಡಿಮೆ ಮಾಡಲು ರಾಜ್ಯ ಸರಕಾರ ಆಯ್ದ ಚಟುವಟಿಕೆಗಳಿಗೆ ಅವಕಾಶ ನೀಡಿದೆ.

 

ಗ್ರಾಮೀಣ ಪ್ರದೇಶದಲ್ಲಿ ರಸ್ತೆ ಕಾಮಗಾರಿ, ನೀರಾವರಿ ಯೋಜನೆ, ಕಟ್ಟಡ ನಿರ್ಮಾಣ, ಕೈಗಾರಿಕೆ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಆದರೆ, ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅಲ್ಲದೆ, ಸ್ಥಳೀಯ ಕಾರ್ಮಿಕರನ್ನು ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಬೇರೆ ಕಡೆಯಿಂದ ಅಥವಾ ಹೊರಗಿನಿಂದ ಕಾರ್ಮಿಕರನ್ನು ಕರೆಸಿಕೊಳ್ಳಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

 

ಯಾವುದೇ ಸಭೆ, ಸಮಾರಂಭಗಳನ್ನು ನಡೆಸಲು ಅವಕಾಶವಿಲ್ಲ. ಅಂತ್ಯ ಸಂಸ್ಕಾರದಲ್ಲಿ 20 ಮಂದಿ ಮಾತ್ರ ಸೇರಲು ಅವಕಾಶ. ಅನಿವಾರ್ಯವಿದ್ದರೆ ಮಾತ್ರ ವಾಹನ ಸಂಚಾರ. ಉಳಿದಂತೆ ಕಾಫಿ, ಟೀ, ರಬ್ಬರ್ ಎಸ್ಟೇಟ್‍ಗಳಲ್ಲಿ ಕರ್ತವ್ಯ ನಿರ್ವಹಿಸಲು ವಿನಾಯಿತಿ ನೀಡಿದ್ದು, ಯಾವುದೇ ಕಾರಣಕ್ಕೂ ದ್ವಿಚಕ್ರ ವಾಹನ ಸಂಚಾರಕ್ಕೆ ಅವಕಾಶ ಇಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಹೆದ್ದಾರಿಗಳಲ್ಲಿ 20 ಕಿಲೋ ಮೀಟರ್ ಗಳ ಅಂತರದಲ್ಲಿ ಡಾಬಾಗಳನ್ನು ತೆರೆಯಲು ಅವಕಾಶ, ಸಣ್ಣ ಕೈಗಾರಿಕೆ ಚಟುವಟಿಕೆ, ಕಲ್ಲಿದ್ದಲು ಮತ್ತು ಗಣಿಗಾರಿಕೆ ಚಟುವಟಿಕೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಕಾರ್ಮಿಕರು ಚಟುವಟಿಕೆ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

 

మరింత సమాచారం తెలుసుకోండి: