ಬೆಂಗಳೂರಿನಲ್ಲಿ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆ ಅದೆಷ್ಟೋ ಆಸ್ಪತ್ರೆಗಳಲ್ಲಿ ಕೊರೋನಾ ರೋಗಿಗಳಿಗೆ ಬೆಡ್ ಕೊರತೆ ಉಂಟಾಗುತ್ತಿದೆ ಇದರಿಂದಾಗಿ ಅದೆಷ್ಟೋ ಮಂದಿ ಜೀವ ಬಿಟ್ಟಿದ್ದಾರೆ, ಈಗಾಗಿ ಸಾಕಷ್ಟು ದೂರುಗಳು ಮುಖ್ಯಮತ್ರಿಗಳಿಗೆ ತಲುಪಿವೆ ಈ ದೂರುಗಳನ್ನು ಗಮನಿಸಿದ ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಒಂದು ಖಡಕ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ.

 

ಹೌದು ವಲಯಗಳಲ್ಲಿ ಇನ್ನು ಮುಂದೆ ಕೊರೊನಾ ನಿಯಂತ್ರಣದ ಕುರಿತಂತೆ ಸಾರ್ವಜನಿಕರಿಂದ ದೂರು ಬಂದರೆ ಅಂತಹ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ನೇರವಾಗಿಯೇ ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

 

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊರೊನಾ ನಿಯಂತ್ರಣ ಕುರಿತಂತೆ ಇಂದು ರಾಜರಾಜೇಶ್ವರಿ ವಲಯದ ಉಸ್ತುವಾರಿಗಳು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಯಡಿಯೂರಪ್ಪ ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣದಲ್ಲಿ ಸಭೆ ನಡೆಸಿದರು.

ನಾನು ಇನ್ನು ಎಷ್ಟು ಸಭೆಗಳನ್ನು ನಡೆಸಬೇಕು?. ಪ್ರತಿದಿನ ಸಭೆಗಳನ್ನು ನಡೆಸುತ್ತಿದ್ದರೆ ಕೊರೊನಾ ನಿಯಂತ್ರಣಕ್ಕೆ ಬರುವುದು ಯಾವಾಗ? ಜನ ಚಿಕಿತ್ಸೆ ಸಿಗದೆ ಸಾಯುತ್ತಿದ್ದಾರೆ. ನಿಮಗೆ ಇದು ಅರ್ಥವಾಗುವುದಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಇನ್ನು ಮುಂದೆ ವಲಯಗಳಲ್ಲಿ ಸಾರ್ವಜನಿಕರಿಂದ ಸಣ್ಣ ದೂರುಗಳು ಬಂದರೂ ನಾನು ಅದಕ್ಕೆ ಅಧಿಕಾರಿಗಳನ್ನೇ ಹೊಣೆ ಮಾಡುತ್ತೇನೆ. ಪ್ರತಿಯೊಂದಕ್ಕೂ ನಾನೇ ನಿಮಗೆ ಎಲ್ಲವನ್ನೂ ಹೇಳಬೇಕೆ? ಇಂತಹ ಸಮಯದಲ್ಲೂ ನೀವು ಮೈಚಳಿ ಬಿಟ್ಟು ಕೆಲಸ ಮಾಡಬೇಕಿತ್ತು ಎಂದು ಹರಿಹಾಯ್ದಿದ್ದಾರೆ.

 

ಈವರೆಗೂ ನಾನು ಯಾವುದೇ ಅಧಿಕಾರಿಗಳನ್ನು ಟೀಕೆ ಇಲ್ಲವೇ ದೂಷಣೆ ಮಾಡಿಲ್ಲ. ಆದರೆ ನಿಮ್ಮ ಕೆಲಸ ನನಗೆ ತೃಪ್ತಿ ತಂದಿಲ್ಲ. ವಲಯಗಳಲ್ಲಿ ಜನಪ್ರತಿನಿಧಿಗಳು, ಎನ್‍ಜಿಒಗಳ ಸಹಭಾಗಿತ್ವದಲ್ಲಿ ಕೆಲಸ ಮಾಡಲು ನಿಮಗೆ ಕಷ್ಟವಾದರೂ ಏನು? ಪ್ರತಿಯೊಂದನ್ನು ಸಭೆ ಕರೆದು ಹೀಗೇ ಮಾಡಿ ಎಂದು ಹೇಳಲು ನೀವು ಚಿಕ್ಕಮಕ್ಕಳೇ? ಎಂದು ಸಿಎಂ ಅಧಿಕಾರಿಗಳಿಗೆ ಚಳಿಬಿಡಿಸಿದರು.

 

ಇಲ್ಲಿಯವರೆಗೆ ಸಭೆ ನಡೆಸಿದ್ದಾಗಿದೆ. ಯಾವ ಯಾವ ನಿಯಮಗಳನ್ನು ಪಾಲನೆ ಮಾಡಬೇಕು? ಹೇಗೆ ನಿಯಂತ್ರಣ ಮಾಡಬೇಕು? ಎಲ್ಲವನ್ನೂ ಸವಿಸ್ತಾರವಾಗಿ ಹೇಳಿದ್ದೇವೆ. ಇನ್ನು ನನಗೆ ಫಲಿತಾಂಶ ಬರಬೇಕು. ಏನೇ ಸಮಸ್ಯೆಗಳಿದ್ದರೂ ಉಸ್ತುವಾರಿ ಸಚಿವರು, ಸಂಬಂಧಪಟ್ಟವರ ಜೊತೆ ಚರ್ಚೆ ಮಾಡಿ ಶತಾಯಗತಾಯ ಕೊರೊನಾವನ್ನು ನಿಯಂತ್ರಣ ಮಾಡಲೇಬೇಕು. ಇಲ್ಲದ ಸಬೂಬುಗಳನ್ನು ಹೇಳಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ಕೊಟ್ಟರು.

 

ಜನಪ್ರತಿನಿಧಿಗಳು ಕೂಡ ಹೆಚ್ಚು ಹೆಚ್ಚು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ನಿಮ್ಮ ವಲಯಗಳಲ್ಲಿ ಏನೇನು ಸಮಸ್ಯೆಗಳಿವೆ ಎಂಬುದನ್ನು ಪಟ್ಟಿ ಮಾಡಿಕೊಳ್ಳಿ. ಸೋಂಕಿತರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲು ವ್ಯವಸ್ಥೆ ಕಲ್ಪಿಸಬೇಕು. ಒಂದು ವೇಳೆ ಆಯಂಬುಲೆನ್ಸ್ ಕೊರತೆ ಇದ್ದರೆ ಬಾಡಿಗೆಗೆ ಪಡೆದುಕೊಳ್ಳಿ.

 

ಈಗಾಗಲೇ ಖರೀದಿಗೂ ಸೂಚನೆ ಕೊಟ್ಟಿದ್ದೇವೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಿ. ಕಂಟೈನ್ಮೆಂಟ್ ಜೋನ್‍ಗಳಲ್ಲಿ ಇನ್ನಷ್ಟು ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಿ. ಆರ್ಥಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದಾರೆ.

 

ಲಾಕ್‍ಡೌನ್ ಎಲ್ಲದಕ್ಕೂ ಪರಿಹಾರವಲ್ಲ. ಆರ್ಥಿಕ ಪರಿಸ್ಥಿತಿಯ ಕಡೆಗೂ ಗಮನಕೊಡಬೇಕು. ಲಾಕ್‍ಡೌನ್ ಇಲ್ಲದೆ ಕೊರೊನಾ ನಿಯಂತ್ರಣ ಮಾಡಬೇಕು. ಇನ್ನು ಮುಂದಾದರೂ ಎಲ್ಲರೂ ಸಮನ್ವಯದಿಂದ ಕೆಲಸ ಮಾಡಿ ಎಂದು ಸಿಎಂ ಸಲಹೆ ಮಾಡಿದ್ದಾರೆ.

ಸಭೆಯಲ್ಲಿ ಸಹಕಾರ ಸಚಿವ ಹಾಗೂ ಆರ್.ಆರ್.ನಗರ ಉಸ್ತುವಾರಿ ಎಸ್.ಟಿ.ಸೋಮಶೇಖರ್, ವಲಯ ಸಂಯೋಜನಾಧಿಕಾರಿ ಡಾ.ವಿಶಾಲ್, ಬಿಬಿಎಂಪಿ ಅಧಿಕಾರಿಗಳು, ಪೊಲೀಸರು ಮತ್ತಿತರರು ಭಾಗವಹಿಸಿದ್ದರು.

 

మరింత సమాచారం తెలుసుకోండి: