ದೇಶದಲ್ಲಿ ಗೋಹತ್ಯೆ ಅವ್ಯಾಹತವಾಗಿ ನಡೆಯುತ್ತಿದ್ದು ಸರ್ಕಾರಗಳು ಗೋಹತ್ಯೆಯ ನಿಷೇಧ ಕಾಯ್ದೆ ಬಗ್ಗೆ ಎಷ್ಟೆ ಒಲವನ್ನು ತೋರಿದರೂ ಕೂಡ ಗೋಹತ್ಯೆಯನ್ನು ನಿಷೇಧಿಸುವಂತಹ ಕೆಲಸವನ್ನು ಯಾವ ಸರ್ಕಾರಗಳೂ ಕೂಡ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ರಾಮಚಂದ್ರಾಪುರ ಮಠದ ಶ್ರೀಗಳು ಈ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.



 

 

 

ಹೌದು  ಸೆ. 21ರಿಂದ ಆರಂಭವಾಗಲಿರುವ ರಾಜ್ಯ ವಿಧಾನಮಂಡಲದ ಅಧಿವೇಶನದಲ್ಲೇ 'ಸಂಪೂರ್ಣ ಗೋಹತ್ಯಾ ನಿಷೇಧ ಮತ್ತು ಭಾರತೀಯ ಗೋತಳಿಗಳ ಸಂರಕ್ಷಣೆ-ಸಂವರ್ಧನೆಗೆ ಅನುವು ಮಾಡಿಕೊಡುವ ಮಸೂದೆ'ಯನ್ನು ಅಂಗೀಕರಿಸಬೇಕು ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.






ಶ್ರೀರಾಮಚಂದ್ರಾಪುರದ ಭಾರತೀಯ ಗೋಪರಿವಾರ ವತಿಯಿಂದ ಅಭಯಾಕ್ಷರ ಅಭಿಯಾನದಡಿ ಒಂದು ಕೋಟಿಗೂ ಅಧಿಕ ಮಂದಿಯ ಪ್ರತ್ಯೇಕ ಹಕ್ಕೊತ್ತಾಯ ಪತ್ರಗಳನ್ನು ರಾಜ್ಯದ ಮುಖ್ಯಮಂತ್ರಿ ಹಾಗೂ ದೇಶದ ಪ್ರಧಾನಿಯವರಿಗೆ ಸಲ್ಲಿಸಲಾಗಿದೆ. ಪಕ್ಷಭೇದ, ಧರ್ಮಭೇದ ಮರೆತು ನಾಡಿನ ಎಲ್ಲ ಸ್ತರಗಳ ಗಣ್ಯರು ಹಕ್ಕೊತ್ತಾಯ ಮಂಡಿಸಿದ್ದು, ಸರ್ಕಾರ ಇನ್ನು ವಿಳಂಬ ಮಾಡದೆ ಪ್ರಸಕ್ತ ಅಧಿವೇಶನದಲ್ಲೇ ಗೋಹತ್ಯೆ ನಿಷೇಧದ ಮಸೂದೆ ಅಂಗೀಕರಿಸಬೇಕು ಎಂದು ಸ್ವಾಮೀಜಿ ಆಗ್ರಹಿಸಿದ್ದಾರೆ.






ಗೋವು ಇಲ್ಲದ ಬದುಕನ್ನು ಕಲ್ಪಿಸಿಕೊಳ್ಳಲೂ ಅಸಾಧ್ಯ. ಆದ್ದರಿಂದ ಗೋವಿನ ವಿಚಾರದಲ್ಲಿ ರಾಜಕೀಯ ಮಾಡದೇ ಎಲ್ಲ ಪಕ್ಷಗಳು ಈ ಮಸೂದೆಯನ್ನು ಬೆಂಬಲಿಸಿ ಸರ್ವಾನುಮತದಿಂದ ಅಂಗೀಕರಿಸಿ ಇಡೀ ದೇಶಕ್ಕೆ ಮಾದರಿಯಾಗಬೇಕು ಎಂದು ಸಲಹೆ ಮಾಡಿದ್ದಾರೆ. ಗೋವುಗಳ ರಕ್ಷಿಸಲು ಪ್ರತಿ ಜಿಲ್ಲೆಯಲ್ಲಿ ಗೋಸ್ವರ್ಗ ನಿರ್ಮಿಸಬೇಕು. ಈಗಾಗಲೇ ಉತ್ತರಕನ್ನಡದ ಸಿದ್ದಾಪುರದ ಬಳಿ ಸಾವಿರಕ್ಕೂ ಹೆಚ್ಚು ಗೋವುಗಳ ಗೋಸ್ವರ್ಗ ನಿರ್ಮಿಸಿ ಯಶಸ್ವಿಯಾಗಿ ನಿರ್ವಹಿಸಿಕೊಂಡು ಬರುತ್ತಿರುವ ಶ್ರೀಮಠ ಇದಕ್ಕೆ ಅಗತ್ಯ ತಾಂತ್ರಿಕ ನೆರವು ನೀಡಲು ಸಿದ್ಧವಿದೆ. ರಾಜ್ಯದ ಪ್ರವಾಸಿ ತಾಣಗಳಲ್ಲಿ ಸರ್ಕಾರವೇ ಗವ್ಯೋತ್ಪನ್ನ ಮಾರಾಟ ಘಟಕಗಳನ್ನು ಸ್ಥಾಪಿಸಬೇಕು ಎಂದೂ ಅವರು ಹೇಳಿದ್ದಾರೆ.






ಪಕ್ಷ, ಧರ್ಮ ಭೇದ ಮರೆತು ಅಭಯಾಕ್ಷರ ಅಭಿಯಾನದಡಿ ರಾಜ್ಯದಲ್ಲಿ ಲಕ್ಷಾಂತರ ಗೋಪ್ರೇಮಿಗಳು ಭಾಗಿಯಾಗಿದ್ದಾರೆ. ಚಿತ್ರದುರ್ಗದಲ್ಲಿ 2018ರಲ್ಲಿ ನಡೆದ ಅಭಿಯಾನದಲ್ಲಿ ಜಿಲ್ಲೆಯ ಅನೇಕ ಮಠಾಧೀಶರು, ವಿವಿಧ ಶಾಸಕರು, ಚುನಾಯಿತ ಪ್ರತಿನಿಧಿಗಳು, ಧರ್ಮಗುರುಗಳು, ಶಿಕ್ಷಣ ತಜ್ಞರು ಬೆಂಬಲಿಸಿ, ಈ ಕಾರ್ಯಕ್ಕೆ ಪ್ರೋತ್ಸಾಹಿಸಿದ್ದಾರೆ.






ಭಾರತೀಯ ಗೋ ತಳಿಗಳ ಸಂರಕ್ಷಣೆ ಮತ್ತು ಸಂವರ್ಧನೆ ದೃಷ್ಟಿಯಿಂದ ರಾಜ್ಯದಲ್ಲಿ ಗೋಹತ್ಯೆ ಸಂಪೂರ್ಣ ನಿಷೇಧವಾಗಬೇಕು. ಈ ತಳಿಗಳನ್ನು ಸಾಕುವ ರೈತರಿಗೆ ರಾಜ್ಯ ಸರ್ಕಾರ ವಿಶೇಷ ನೆರವು ನೀಡಬೇಕು ಎಂಬುದು ಸಮಿತಿಯ ಆಶಯವಾಗಿದೆ.






ಛತ್ತೀಸ್‍ಗಡದಲ್ಲಿ ಅಲ್ಲಿನ ಕಾಂಗ್ರೆಸ್ ಸರ್ಕಾರ ಈಗಾಗಲೇ ಗೋಮಯವನ್ನು ಪ್ರತಿ ಕೆ.ಜಿಗೆ ₹ 3ರ ದರದಲ್ಲಿ ರೈತರಿಂದ ಖರೀದಿಸುತ್ತಿದೆ. ಇದೇ ಮಾದರಿಯಲ್ಲಿ ರಾಜ್ಯ ಸರ್ಕಾರ ಕೂಡಾ ಗೋಮೂತ್ರ, ಗೋಮಯ ಖರೀದಿಗೆ ಮುಂದಾಗಬೇಕು. ಉತ್ತರ ಪ್ರದೇಶ ಸೇರಿ ವಿವಿಧ ರಾಜ್ಯಗಳು ರಚಿಸಿರುವ ಗೋಸೇವಾ ಆಯೋಗಗಳು ಗೋಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಅದು ಇಲ್ಲಿಯೂ ಜಾರಿಯಾಗಬೇಕು ಎಂದು ಸರ್ಕಾರಕ್ಕೆ ಸಮಿತಿ ಕೋರಿದೆ.

మరింత సమాచారం తెలుసుకోండి: