ಬೆಂಗಳೂರು: ಕಳೆದ ಕೆಲ ದಿನಗಳಿಂದ ಡಾಲಿ ಧನುಂಜಯ್ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿಯಾಗಿ ಮಿಂಚುತ್ತಿದ್ದಾರೆ. ಹೌದು, ಇದೀಗ ಪಾಪ್​ ಕಾರ್ನ್ ಮಂಕಿ ಟೈಗರ್ ಬಿಡುಗಡೆಯ ಹೊಸ್ತಿಲಲ್ಲಿರುವಾಗ ಡಾಲಿ ಧನಂಜಯ ಅವರಿಗೆ ಬಂಪರ್ ಆಫರ್ ಬಂದಿದ್ದು, ಬೆಂಗಳೂರಿನ ಮಾಜಿ ಭೂಗತ ದೊರೆ ಜಯರಾಜ್ ​ರ ಬಯೋಪಿಕ್​ ನಲ್ಲಿ ನಟಿಸುವ ಆಫರ್ ಬಂದಿದೆ. 
 
ಅಗ್ನಿ ಶ್ರೀಧರ್ ಕಥೆ ಇರುವ ಈ ಚಿತ್ರವನ್ನು ‘ಅಳಿದು ಉಳಿದವರು’ ಚಿತ್ರದ ನಾಯಕ, ನಿರ್ಮಾಪಕ ಅಶು ಬೆದ್ರ ನಿರ್ಮಾಣ ಮಾಡುತ್ತಿದ್ದು ವಿಶೇಷ ಏನಪ್ಪಾ ಅಂದರೆ ಈ ಚಿತ್ರ ಐದು ಭಾಷೆಗಳಲ್ಲಿ ನಿರ್ಮಾಣವಾಗಲಿದೆ. ‘ಒಬ್ಬ ನಟನನ್ನು ಒಳ್ಳೊಳ್ಳೆಯ ಪಾತ್ರಗಳು ಹುಡುಕಿಕೊಂಡು ಬರುತ್ತಿದ್ದರೆ ಅದಕ್ಕಿಂತ ಖುಷಿ ಬೇರೆ ಇಲ್ಲ. ಈ ಚಿತ್ರದಲ್ಲಿ ನೀವು ನಟಿಸಬೇಕು, ಅದು ಜಯರಾಜ್ ಪಾತ್ರ ಎಂದಾಗ ಬಹಳ ಖುಷಿಯಿಂದ ಒಪ್ಪಿಕೊಂಡಿದ್ದೇನೆ. ನಾನು ಅಗ್ನಿ ಶ್ರೀಧರ್ ಅವರ ಬರವಣಿಗೆಗೆ ದೊಡ್ಡ ಫ್ಯಾನ್. ‘ಎದೆಗಾರಿಕೆ’ ಚಿತ್ರ ಅನೌನ್ಸ್ ಆದಾಗ ನನಗೆ ಆ ಪಾತ್ರ ಸಿಗಲಿಲ್ಲವಲ್ಲ ಎಂದು ಹೊಟ್ಟೆ ಉರಿದುಕೊಂಡಿದ್ದೆ. ಈಗ ಅವರ ಕಥೆಯ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಜಯರಾಜ್ ಪಾತ್ರಕ್ಕಾಗಿ ಸದ್ಯದಲ್ಲೇ ತಯಾರಿ ಆರಂಭಿಸಲಿದ್ದೇನೆ’ ಎನ್ನುತ್ತಾರೆ ಧನಂಜಯ.
 
ಪ್ರಸ್ತುತ ಚಿತ್ರದಲ್ಲಿ 1974ರಿಂದ 77ರವರೆಗಿನ ಬೆಂಗಳೂರನ್ನು ತೋರಿಸಲಾಗುತ್ತದಂತೆ. ‘ರೆಟ್ರೋ ಬ್ಯಾಕ್ ​ಡ್ರಾಪ್​ ನಲ್ಲಿ ನಟಿಸುವುದು ನನಗೆ ಮೊದಲಿನಿಂದಲೂ ಕನಸಾಗಿತ್ತು. ಅದು ಈ ಪಾತ್ರದ ಮೂಲಕ ನನಸಾಗುತ್ತಿದೆ. ಅಶು ಬೆದ್ರ, ಶೂನ್ಯ ಸೇರಿ ಎಲ್ಲರೂ ಸಿನಿಮಾ ಬಗ್ಗೆ ತುಂಬಾ ಪ್ಯಾಷನ್ ಇಟ್ಟುಕೊಂಡವರು. ಖಂಡಿತ ಇದು ಬೇರೆಯದ್ದೇ ಮಾದರಿಯ ಚಿತ್ರವಾಗುತ್ತದೆ’ ಎಂದು ಧನಂಜಯ ಸಂತಸ ವ್ಯಕ್ತಪಡಿಸಿದರು.
 
 ‘ಈ ಚಿತ್ರ ಮಾಡಬೇಕು ಎಂದು ತೀರ್ಮಾಸಿದಾಗ, ನಮ್ಮ ಬಚ್ಚನ್ ಅವರ ಪುತ್ರ ರೋಷನ್ ಧನಂಜಯ ಅವರ ಹೆಸರನ್ನು ಸೂಚಿಸಿದ. ನಾನು ಅವರ ‘ಅಲ್ಲಮ’ ಚಿತ್ರ ನೋಡಿ ಖುಷಿ ಪಟ್ಟಿದ್ದೆ. ಆತ ಒಬ್ಬ ಅದ್ಭುತ ನಟ ಎಂಬುದು ನನಗೆ ಅದರಲ್ಲೇ ಗೊತ್ತಾಗಿತ್ತು. ಹಾಗಾಗಿ ಜಯರಾಜ್ ಪಾತ್ರಕ್ಕೆ ಅವರನ್ನೇ ಆಯ್ಕೆ ಮಾಡಿದ್ದೇವೆ. ಈ ಪಾತ್ರವನ್ನು ಅವರು ಆವಾಹಿಸಿಕೊಳ್ಳಲಿದ್ದಾರೆ ಎಂಬ ನಂಬಿಕೆ ನನಗಿದೆ’ ಎಂದು ಅಗ್ನಿ ಶ್ರೀಧರ್ ಹೇಳಿದ್ದಾರೆ.
 
 
 

మరింత సమాచారం తెలుసుకోండి: