ಚಂಡೀಗಢ: ರೈತರು ತೋಟಗಳಲ್ಲಿ ಹಸನು ಮಾಡಲು ಹೆಚ್ಚಾಗಿ ತ್ಯಾಜ್ಯಗಳೆಲ್ಲವನ್ನು ಸುಡುತ್ತಾರೆ. ಇದರಿಂದ ವಿಪರೀತವಾಗಿ ವಾಯುಮಾಲಿನ್ಯ ಉಂಟಾಗುತ್ತದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಪಂಜಾಬ್ ಸರ್ಕಾರ ರೈತರಿಗೆ ಆಫರ್ ನೀಡುವ ಮೂಲಕ ಹೊಸ ಯೋಜನೆಯೊಂದು ಘೋಷಣೆ ಮಾಡಿದೆ.  ಭಾರೀ ಪ್ರಮಾಣದಲ್ಲಿ ರೈತರು ತಮ್ಮ ಜಮೀನಿನಲ್ಲಿ ಕೃಷಿ ತ್ಯಾಜ್ಯ ಸುಡುತ್ತಿರುವುದರ ಪರಿಣಾಮ ರಾಜ್ಯದಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟಲು ಪಂಜಾಬ್ ಸರ್ಕಾರ ಹೊಸ ಉಪಾಯ ಮಾಡಿದೆ. ಕೃಷಿ ತ್ಯಾಜ್ಯ ಸುಡದೇ ಇದ್ದರೆ ಆ ರೈತರ ಪ್ರತಿ ಎಕ್ರೆಗೆ 2,500 ರೂ. ಪರಿಹಾರ ಧನವನ್ನು ನೀಡಲು ಮುಂದಾಗಿದೆ.


ಮಾಯುಮಾಲಿನ್ಯದ ಮಟ್ಟ ದಿನೇ ದಿನೇ ಹೆಚ್ಚಾಗುತ್ತಿದ್ದು ಉಸಿರಾಡಲು ಜನ ತೊಂದರೆ ಪಡುತ್ತಿದ್ದಾರೆ. ಹೀಗಾಗಿ ಪಂಜಾಬ್ ಸರ್ಕಾರ ರೈತರಿಗೆ ಪರಿಹಾರ ಧನ ಘೋಷಿಸಿ ಕೃಷಿ ತ್ಯಾಜ್ಯ ಸುಡದಂತೆ ಮನವಿ ಮಾಡಿಕೊಂಡಿದೆ. ಕೃಷಿ ತ್ಯಾಜ್ಯವನ್ನು ಸುಡದೇ ಇದ್ದರೆ ಪ್ರತಿ ಎಕ್ರೆಗೆ 2,500 ರೂಪಾಯಿ ರೈತರಿಗೆ ನೀಡುವುದಾಗಿ ಇದೀಗ ತಿಳಿಸಿದೆ. 


ಇದರ ಬಗ್ಗೆ ಕೃಷಿ ಇಲಾಖೆಯ ಕಾರ್ಯದರ್ಶಿ ಕಹಾನ್ ಸಿಂಗ್ ಪನ್ನು ಮಾತನಾಡಿ, ಬಾಸ್‍ಮತಿ ಹಾಗೂ ಇತರೆ ಭತ್ತದ ಬೆಳೆಯನ್ನು ಬೆಳೆಯುವ ರೈತರು 5 ಎಕ್ರೆ ಜಮೀನು ಹೊಂದಿದ್ದರೆ. ಅಲ್ಲಿ ಅವರು ಕೃಷಿ ತ್ಯಾಜ್ಯ ಸುಡದಿದ್ದರೆ, ಅವರ ಪ್ರತಿ ಎಕ್ರೆಗೆ 2,500 ರೂ. ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಈ ಪರಿಹಾರ ಧನವನ್ನು ಪಡೆಯಲು ರೈತರು ನವೆಂಬರ್ 30ರ ಒಳಗೆ ಸಂಬಂಧಪಟ್ಟ ಪಂಚಾಯ್ತಿ ವ್ಯಾಪ್ತಿಯಲ್ಲಿ ಬೇಕಾದ ದಾಖಲೆಗಳನ್ನು ಒಪ್ಪಿಸಬೇಕಿದೆ. ಈ ಬಗ್ಗೆ ಗ್ರಾಮ ಪಂಚಾಯ್ತಿಯೇ ಕಾರ್ಯ ನಿರ್ವಹಿಸುತ್ತದೆ. ಹಾಗೆಯೇ ದಾಖಲೆಗಳನ್ನು ನೀಡಿದ ಬಳಿಕ ಪರಿಹಾರ ಧನವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಹಾಕಲಾಗುತ್ತದೆ ಎಂದು ಪನ್ನು ಅವರು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಸರ್ಕಾರದ ಆದೇಶವನ್ನು ಮೀರಿ ರೈತರು ಕೃಷಿ ತ್ಯಾಜ್ಯವನ್ನು ಸುಟ್ಟರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ಕೂಡ ನೀಡಿಲಾಗಿದೆ. ಇದೀಗ ಈ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ಜನರು ಪಂಚಾಯಿತಿ ಮುಂದೆ ಕ್ಯೂ ನಿಂತಿದ್ದಾರಂತೆ.


మరింత సమాచారం తెలుసుకోండి: