ರಾಜ್ಯದಲ್ಲಿ ಕೊರೋನಾ ವಯರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಪ್ರತಿನಿತ್ಯ ನಾಲ್ಕು ಸಾವುರದ ಗಡಿಯನ್ನು ದಾಟುತ್ತಿದೆ. ಈಗಾಗಲೇ ರಾಜ್ಯದಲ್ಲಿ ಕೊರೋನಾ ಸೋಂಕು ಲಕ್ಷದ ಗಡಿಯನ್ನು ಸಮೀಪಿಸುತ್ತಿದೆ, ಇದರ ಜೊತೆಗೆ ರಾಜ್ಯ ರಾಜಧಾನಿಯಲ್ಲೂ ಕೂಡ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದನ್ನು ನಿಯಂತ್ರಿಸಲು ಸದ್ಯಕ್ಕೆ ಇರುವ ಕೊರೋನಾ ವಾರಿಯರ್ಸ್ನ  ಕೈ ಸೋಲುತ್ತಿರುವುದರಿಂದ . ಸರ್ಕಾರದ ವಿವಿಧ ಇಲಾಖೆಯಲ್ಲಿ ಕೆಲಸ ಮಾಡುವ ನೌಕರರನ್ನು ಕೊರೋನಾ ನಿಯಂತ್ರಿಸುವ ಕೆಲಸಕ್ಕೆ ನೇಮಿಸಿಕೊಳ್ಳುವಂತಹ ಚಿಂತನೆಯನ್ನು ಸರ್ಕಾರ ಮಾಡಿದೆ.

 

ಹೌದು ರಾಜ್ಯ ರಾಜಧಾನಿಯಲ್ಲಿ ಕರೊನಾ ಸೋಂಕಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸೋಂಕು ನಿಯಂತ್ರಣ ಕಾರ್ಯಕ್ಕೆ ಸಿಬ್ಬಂದಿ ಕೊರತೆ ನೀಗಿಸಲು ಮುಂದಾಗಿರುವ ರಾಜ್ಯ ಸರ್ಕಾರ, ವಿವಿಧ ಇಲಾಖೆಯ ಶೇ.75ರಷ್ಟು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಬಳಸಿಕೊಳ್ಳಲು ನಿರ್ಧರಿಸಿದೆ.

 

ಈ ಸಂಬಂಧ ಗೃಹ, ಆರ್ಥಿಕ, ಆರೋಗ್ಯ, ವೈದ್ಯಕೀಯ, ಶಿಕ್ಷಣ, ಕಂದಾಯ (ವಿಪತ್ತು ನಿರ್ವಹಣೆ), ಸಾರಿಗೆ ಆಯುಕ್ತಾಲಯ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಹೊರತುಪಡಿಸಿ ಉಳಿದ ಇಲಾಖೆಗಳಿಗೆ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯ್​ ಭಾಸ್ಕರ್​ ಆದೇಶ ಹೊರಡಿಸಿದ್ದಾರೆ.

 

ಬೆಂಗಳೂರು ನಗರ ಮತ್ತು ಬೆಂ.ಗ್ರಾಮಾಂತರ ಜಿಲ್ಲಾ ಮಟ್ಟದಲ್ಲಿ ಹಾಗೂ ಬೂತ್​ ಮಟ್ಟದಲ್ಲಿ ಕೋವಿಡ್​ ನಿಯಂತ್ರಣ ಕರ್ತವ್ಯ ನಿರ್ವಹಿಸಲು ಸಿಬ್ಬಂದಿ ಅವಶ್ಯತೆ ಇದೆ. ಹೀಗಾಗಿ ಇಲಾಖೆಗಳು 55 ವರ್ಷದೊಳಗಿನ ಅಧಿಕಾರಿಗಳು ಮತ್ತು ಸಿಬ್ಬಂದಿಯ ಪೂರ್ಣ ಮಾಹಿತಿಯನ್ನು ಜು.28ರ ಸಂಜೆ 5ರೊಳಗೆ ಬಿಬಿಎಂಪಿ ಆಯುಕ್ತರಿಗೆ ಇ-ಮೇಲ್​ ಮೂಲಕ ಸಲ್ಲಿಸುವಂತೆ ಸರ್ಕಾರ ಸೂಚಿಸಿದೆ.

 

ಕೋವಿಡ್​ ನಿಯಂತ್ರಣ ಕಾರ್ಯಕ್ಕೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ವಿವಿಧ ಇಲಾಖೆಗಳ 55 ವರ್ಷದೊಳಗಿನ ಶೇ.75ರಷ್ಟು ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದೆ. ಇದರಲ್ಲಿ ಗರ್ಭಿಣಿ, ಬಾಣಂತಿ, ಅಂಗವಿಕಲರನ್ನು ಹೊರತುಪಡಿಸಲಾಗಿದೆ. ಶೇ.25 ಸಿಬ್ಬಂದಿಯನ್ನು ಮಾತ್ರ ಇಲಾಖೆಗಳ ಕಾರ್ಯಗಳಿಗೆ ಬಳಸಿಕೊಂಡು, ಉಳಿದ ಶೇ.75 ಸಿಬ್ಬಂದಿಯನ್ನು ಕೋವಿಡ್​ ನಿಯಂತ್ರಣ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತದೆ.

ಮಾಹಿತಿ ಕಳುಹಿಸುವ ಮೊದಲು ಪ್ರಸ್ತುತ ವಿಳಾಸ, ವಾರ್ಡ್​ ಸಂಖ್ಯೆ ಮತ್ತು ಮೊಬೈಲ್​ ಸಂಖ್ಯೆಯನ್ನು ಖಚಿತ ಪಡಿಸಿಕೊಳ್ಳಬೇಕು. ಅವರೆಲ್ಲರೂ ಪೂರ್ಣ ಸಮಯದ ಆಧಾರದ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯ ಆದೇಶದಡಿ ಕೆಲಸ ನಿರ್ವಹಿಸುವ ಅಗತ್ಯವಿದ್ದು, ಯಾವುದೇ ವಿನಾಯಿತಿ ಇರುವುದಿಲ್ಲ. ಅಧಿಕಾರಿ ಹಾಗೂ ಸಿಬ್ಬಂದಿ ಮಾಹಿತಿಯನ್ನು ಇಲಾಖೆಗಳು ಮುಖ್ಯಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರಿಗೆ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

 

మరింత సమాచారం తెలుసుకోండి: