ಸಿಡ್ನಿ(ಆಸ್ಟ್ರೇಲಿಯಾ): ವನಿತೆಯರ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಕ್ಷಣಗಣನೆ ಆರಂಭವಾಗಿದೆ. ಶುಕ್ರವಾರದಿಂದ ಆಸ್ಟ್ರೇಲಿಯದಲ್ಲಿ ಆರಂಭವಾಗಲಿದ್ದು, ಬರೋಬ್ಬರಿ 10 ತಂಡಗಳು ವಿಶ್ವಕಪ್ ಪ್ರಶಸ್ತಿಗಾಗಿ ಸೆಣಸಲಿವೆ. ಈ ಹಿನ್ನೆಲೆಯಲ್ಲಿ ಸಿಡ್ನಿಯ ವಿಶ್ವವಿಖ್ಯಾತ “ಟರೋಂಗ ಝೂ’(ಟರೋಂಗ ಮೃಗಾಲಯ)ನಲ್ಲಿ ಎಲ್ಲ ನಾಯಕಿಯರು “ಮೀಡಿಯಾ ಡೇ’ ಆಚರಿಸಿ ಮಾಧ್ಯಮದವರೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡರು. ಇದಕ್ಕೆ ಮೃಗಾಲಯದ ಪ್ರಾಣಿ ಪಕ್ಷಿಗಳೂ ಸಾಕ್ಷಿಯಾಗಿದ್ದು ಭಾರೀ ವಿಶೇಷವಾಗಿದೆ.
 
ಇದೇ ತಿಂಗಳ 21ರಿಂದ ಆರಂಭವಾಗಲಿರುವ ವನಿತಾ ಟಿ20 ವಿಶ್ವಕಪ್‌ ಮುಖಾಮುಖೀಯ ಫೈನಲ್‌ “ಅಂತಾರಾಷ್ಟ್ರೀಯ ವನಿತಾ ದಿನ’ವಾದ ಮಾ. 8ರಂದು ನಡೆಯುವುದು ವಿಶೇಷ. ಮೆಲ್ಬರ್ನ್ನಲ್ಲಿ ನಡೆಯುವ ಫೈನಲ್‌ ನಲ್ಲಿ ದಾಖಲೆ ಸಂಖ್ಯೆಯ ವೀಕ್ಷಕರು ಹಾಜರಾಗುವ ಸಾಧ್ಯತೆಗಳಿವೆ.ಮಾಧ್ಯಮದವರೊಂದಿಗಿನ ಮುಖಾಮುಖೀ ವೇಳೆ ಎಲ್ಲ ನಾಯಕಿಯರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಮಾತಾಡಿದ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ತಂಡದ ನಾಯಕಿ ಮೆಗ್‌ ಲ್ಯಾನಿಂಗ್‌, “ನಮ್ಮ ಗೆಳೆಯರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಪ್ರತಿಷ್ಠಿತ ವಿಶ್ವಕಪ್‌ ಆಡುವುದು ಹೆಮ್ಮೆಯ ಸಂಗತಿ.ಸಹಜವಾಗಿಯೇ ಒತ್ತಡ, ನಿರೀಕ್ಷೆ ಎರಡೂ ಇದೆ. ನಮ್ಮಂತೆ ಎಲ್ಲ ತಂಡಗಳೂ ಗೆಲುವಿಗೆ ಹೋರಾಡುತ್ತವೆ. ಸಹಜವಾಗಿಯೇ ಪೈಪೋಟಿ ಇರಲಿದೆ  ಎಂದು ತಿಳಿಸಿದ್ದಾರೆ. 
 
ಟೀಂ ಇಂಡಿಯಾ ವನಿತಾ ತಂಡದ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ ಮಾತನಾಡಿ, “ಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದು ನಮ್ಮ ಗುರಿ. ನಮ್ಮ ತಂಡ ದಿನದಿಂದ ದಿನಕ್ಕೆ ಪ್ರಗತಿ ಕಾಣುತ್ತಿದೆ. 2018ರ ನಮ್ಮ ಸಾಧನೆ, ಇದಕ್ಕೆ ಲಭಿಸಿದ ಪ್ರತಿಕ್ರಿಯೆಯನ್ನೆಲ್ಲ ಕಂಡು ಆಶ್ಚರ್ಯವಾಗಿದೆ. ಕಪ್‌ ಎತ್ತಿದರೆ ಅದೊಂದು ಮಹಾನ್‌ ಸಾಧನೆಯಾಗಲಿದೆ’ ಎಂದು ಹೇಳಿದ್ದಾರೆ. 
 
ಇದುವರೆಗೆ 6 ಟಿ20 ವಿಶ್ವಕಪ್‌ ಕೂಟಗಳಲ್ಲಿ ಭಾರತ ಒಮ್ಮೆಯೂ ಫೈನಲ್‌ ಪ್ರವೇಶಿಸಿಲ್ಲ. 3 ಸಲ ಸೆಮಿಫೈನಲ್‌ ಪ್ರವೇಶಿಸಿ ಸೋಲನುಭವಿಸಿದೆ. 2016ರ ತವರಿನ ಪಂದ್ಯಾವಳಿಯಲ್ಲೂ ಭಾರತಕ್ಕೆ ಅದೃಷ್ಟ ಕೈ ಹಿಡಿದಿರಲಿಲ್ಲ.ಇದು ವನಿತಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ 7ನೇ ಆವೃತ್ತಿ. ಆಸ್ಟ್ರೇಲಿಯ ಅತೀ ಹೆಚ್ಚು 4 ಸಲ ಚಾಂಪಿಯನ್‌ ಆಗಿದೆ. ಇಂಗ್ಲೆಂಡ್‌ ಮತ್ತು ವಿಂಡೀಸ್‌ ಒಮ್ಮೆ ಪ್ರಶಸ್ತಿ ಎತ್ತಿವೆ. ಇದೀಗ ಭಾರತ ಮತ್ತೊಮ್ಮೆ ಚಾಂಪಿಯನ್ ಆಗಿ ಹೊರಹೊಮ್ಮಲಿ ಎಂಬುದೇ ಕೋಟ್ಯಾಂತರ ಭಾರತೀಯರ ಆಶಯವಾಗಿದೆ.

మరింత సమాచారం తెలుసుకోండి: