ಬೆಂಗಳೂರು: ಕರ್ನಾಟಕದಲ್ಲಿ ಕನ್ನಡವೇ ಮಾಯವಾಗುತ್ತಿರುವುದಕ್ಕೆ ಕನ್ನಡ ಚಿತ್ರಗಳೇ ಬಲಿಯಾಗುತ್ತಿವೆ. ಇದರ ಸಾಲಿಗೆ ಇದೀಗ ಲವ್ ಮಾಕ್ಟೇಲ್ ಚಿತ್ರವೂ ಕೂಡ ಸಿಲುಕಿತು. ಆದರೆ ಇದೀಗ ಕೊಂಚ ಉಸಿರಾಡಲು ಸಿನಿಮಾ ಪ್ರೇಕ್ಷಕರೇ ಕಾರಣವಾಗಿದ್ದರೆ. ಅದೇಗೆ ಏನು ಎತ್ತ ಎಂಬ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ. 
 
ನೋಡಿದವರೆಲ್ಲಾ ಸಿನಿಮಾ ಬಂಪರ್ ಹಿಟ್​ ಅಂತಿದ್ದಾರೆ. ಬುಕ್​ ಮೈ ಶೋದಲ್ಲಿ ಬರೋಬ್ಬರಿ 90% ರಿವ್ಯೂ ಇದೆ. ವಿಮರ್ಶಕರಿಂದ್ಲೂ ಭರ್ಜರಿ ಮೆಚ್ಚುಗೆ ಸಿಕ್ಕಿದೆ. ಕಿಚ್ಚ ಸುದೀಪ್​ ಸೇರಿದಂತೆ ಸ್ಯಾಂಡಲ್​ವುಡ್​ ಸೆಲೆಬ್ರೆಟೀಸ್​​ ಕೂಡ ಲವ್​ ಮಾಕ್ಟೇಲ್​ ಸವಿಗೆ ಫಿದಾ ಆಗಿದ್ರು. ಇಷ್ಟಾದ್ರೂ ಒಂದೇ ವಾರಕ್ಕೆ ಲವ್​ ಮಾಕ್ಟೇಲ್​ ಸಿನಿಮಾ ಕಥೆ ಮುಗ್ದೇ ಹೋದಂತಾಗಿತ್ತು. ಪ್ರವಾಹದಲ್ಲಿ ಮುಳುಗುತ್ತಿದ್ದವನಿಗೆ ಹುಲ್ಲು ಕಡ್ಡಿ ಆಸರೆ ಅನ್ನುವಂತೆ ಪ್ರೇಕ್ಷಕರ ನೆರವಿನಿಂದ ಕೊನೆಗೂ ಲವ್​ ಮಾಕ್ಟೇಲ್​​ ಚೇತರಿಸಿಕೊಂಡಿದೆ.
 
ಇದೇ ವರ್ಷದ ಜನವರಿ 31ಕ್ಕೆ ರಾಜ್ಯಾದ್ಯಂತ ತೆರೆಕಂಡ ಲವ್ ಮಾಕ್ಟೇಲ್​​ ಚಿತ್ರಕ್ಕೆ 140 ಶೋಗಳು ಸಿಕ್ಕಿದ್ದವು. ಆದ್ರೆ, ಫೆಬ್ರವರಿ 7ಕ್ಕೆ ಅಂದ್ರೆ ಕೇವಲ ಏಳೇ ದಿನಕ್ಕೆ ಆ ಸಂಖ್ಯೆ 6ಕ್ಕೆ ಇಳಿದು ಬಿಟ್ಟಿತ್ತು. ಮೊನ್ನೆ ಶುಕ್ರವಾರ ಶಾರದಾ ಚಿತ್ರಮಂದಿರ ಬಿಟ್ರೆ, ಮತ್ಯಾವುದೇ ಥಿಯೇಟರ್​​ನಲ್ಲಿ ಚಿತ್ರಕ್ಕೆ ಶೋಗಳು ಸಿಕ್ಕಿರಲಿಲ್ಲ. ಕಾರಣ ಕನ್ನಡದ 8 ಸಿನಿಮಾಗಳ ಜೊತೆ ಪರಭಾಷಾ ಸಿನಿಮಾಗಳ ಹಾವಳಿ. ಲವ್​ ಮಾಕ್ಟೇಲ್​ ಸಿನಿಮಾ ಅದ್ಭುತ ಅನ್ನೋ ಮಾತುಗಳು ಕೇಳಿಬಂದ್ರು, ಶೋಗಳು ಸಿಗದೇ ಇದ್ದಿದ್ದು ಚಿತ್ರತಂಡಕ್ಕೆ ಬೇಸರ ತಂದಿತ್ತು.
 
ಲವ್​​ ಮಾಕ್ಟೇಲ್​ ಚಿತ್ರಕ್ಕೆ ಥಿಯೇಟರ್​ ಸಿಗದೇ ಇದ್ದಿದ್ದು, ಕೃಷ್ಣ ಮತ್ತು ಮಿಲನಾ ನಾಗರಾಜ್​ ಜೋಡಿಗೆ ಭಾರೀ ನಿರಾಸೆ ತಂದಿತ್ತು.. ಅಭಿನಯದ ಜೊತೆಗೆ ಹಲವು ವಿಭಾಗಗಳಲ್ಲಿ ಕೆಲಸ ಮಾಡಿರೋ ಇಬ್ಬರಿಗೂ ಒಳ್ಳೆ ಸಿನಿಮಾವನ್ನ ಜನರಿಗೆ ಮುಟ್ಟಿಸೋಕ್ಕೆ ಸಾಧ್ಯವಾಗಲಿಲ್ಲ ಅನ್ನೋ ಬೇಸರ ಕಾಡ್ತಿತ್ತು. ಜನ ಬೇಗ ಬಂದು ಸಿನಿಮಾ ನೋಡಿ, ಇಲ್ಲ ಅಂದ್ರೆ ಸಿನಿಮಾ ಎತ್ತಂಗಡಿಯಾಗುತ್ತೆ ಅಂತ ಪ್ರೇಕ್ಷಕರಲ್ಲಿ ಚಿತ್ರತಂಡ ಮನವಿ ಮಾಡಿಕೊಂಡಿತ್ತು.. ಫೈನಲಿ ಪ್ರೇಕ್ಷಕರು ಚಿತ್ರತಂಡದ ಕೈ ಹಿಡಿದಿದ್ದಾರೆ.ಎರಡೇ ದಿನಕ್ಕೆ ಶೋಗಳ ಸಂಖ್ಯೆ ಹೆಚ್ಚಾಗಿದ್ದು ಇನ್ನಾದರೂ ಕನ್ನಡ ಚಿತ್ರಗಳಿಗೆ ಆದ್ಯತೆ ಹೆಚ್ಚಬೇಕಾಗಿದೆ.

మరింత సమాచారం తెలుసుకోండి: