ಬೆಂಗಳೂರು: 100 ದಿನಗಳ ಆಡಳಿತವನ್ನು ಪೂರೈಸಿರುವ ಬಿಜೆಪಿ ಸರ್ಕಾರವು ಆಪರೇಷನ್ ಕಮಲ ನಡೆಸಿ 17 ಶಾಸಕರನ್ನು ರಾಜೀನಾಮೆ ಕೊಡಿಸಿ ಮುಂಬೈ ಪ್ಲೈಟ್ ಹತ್ತಿಸಿದ್ದರು. ಇದರ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಜ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೇರಿದಂತೆ ಕಾಣದ ಕೈಗಳ ಕೆಲಸ ನಡೆದಿದೆ. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಇದೀಗ ರಾಜ್ಯ ಕಾಂಗ್ರೆಸ್ ರಾಜ್ಯಪಾಲರಾದ ವಜುಭಾಯಿ ವಾಲಾ ಅವರಿಗೆ ಪತ್ರ ಬರೆದಿದ್ದಾರೆ. 


 ಆಪರೇಷನ್‌ ಕಮಲ ನಡೆದಿರುವ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಸಭೆಯೊಂದರಲ್ಲಿ ಹೇಳಿಕೊಂಡಿದ್ದಾರೆ. ಇದರ ವಿಡಿಯೋ, ಆಡಿಯೋ ಎಲ್ಲ ಮಾಧ್ಯಮಗಳಲ್ಲೂ ವರದಿಯಾಗಿದೆ. ಬಿಜೆಪಿಯ ಕುತಂತ್ರ ಜಗಜ್ಜಾಹೀರಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲರಿಗೆ ಕಾಂಗ್ರೆಸ್‌ ಮನವಿ ಸಲ್ಲಿಸಿದೆ. ರಾಜಭವನದಲ್ಲಿ ಮನವಿ ಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌, ಬಿಜೆಪಿ ವಿರುದ್ಧ ಕಿಡಿಕಾರಿದರು. ರಾಜ್ಯಪಾಲರನ್ನ ಭೇಟಿ ಮಾಡಿ ದೂರು ಸಲ್ಲಿಸಿದ್ದೇವೆ. ನಿನ್ನೆ ಒಂದು ಆಡಿಯೋ ಕ್ಲಿಪ್ಪಿಂಗ್ ಹೊರಬಂದಿದೆ. ಆಪರೇಷನ್ ಕಮಲದ ಬಗ್ಗೆ ಆಡಿಯೋ ಲೀಕ್ ಆಗಿದೆ. ಬಿಜೆಪಿಯವರ ಕುತಂತ್ರ ಹೊರಬಿದ್ದಿದೆ ಎಂದರು.


ಶಾಸಕರನ್ನ ರಾಜೀನಾಮೆ ಕೊಡಿಸಿ ಮುಂಬೈನಲ್ಲಿ ವ್ಯವಸ್ಥೆ ಮಾಡಿದವರು ಅಮಿತ್ ಶಾ ಅಂತ ಖುದ್ದು ಯಡಿಯೂರಪ್ಪ ಅವರೇ ಹೇಳಿದ್ದಾರೆ.  ಸಂವಿಧಾನದ ವಿರುದ್ಧವಾಗಿ ಅವರು ಕೆಲಸ ಮಾಡಿದ್ದಾರೆ. ಆ್ಯಂಟಿ ಡಿಫೆಕ್ಷನ್ ಲಾ ಅನ್ವಯ ಆಗಬೇಕು. 10 ಶೆಡ್ಯೂಲ್‌ನಲ್ಲಿ ಅನರ್ಹರ ಮೇಲೆ ಕ್ರಮ ಜರುಗಿಸಬೇಕು ಎಂದು ದಿನೇಶ್‌ ಗುಂಡೂರಾವ್‌ ಆಗ್ರಹಿಸಿದರು. ಇದಕ್ಕೆ ಕುಮ್ಮಕ್ಕು ನೀಡಿರುವ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮೇಲೂ ಕ್ರಮ ಜರುಗಿಸಬೇಕು ಎಂದರು. ಈ ಬಗ್ಗೆ ರಾಷ್ಟ್ರಪತಿಗಳಿಗೆ ಶಿಫಾರಸು ಕಳಿಸುವಂತೆ ಮನವಿ ಮಾಡಿದ್ದೇವೆ. ರಾಜ್ಯಪಾಲರಿಗೂ ಸತ್ಯಾಂಶ ಅರಿವಾಗಿದೆ. ಅಮಿತ್ ಶಾ ಮತ್ತು ಯಡಿಯೂರಪ್ಪ ಸಂವಿಧಾನ ವಿರುದ್ಧ ಕೆಲಸ ಮಾಡಿದ್ದಾರೆ ಎಂದು ದಿನೇಶ್ ಗುಂಡೂರಾರ್ ತಿಳಿಸಿದ್ದಾರೆ. ರಾಜ್ಯಪಾಲರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಕಾದು ನೋಡ ಬೇಕಾಗಿದೆ.




మరింత సమాచారం తెలుసుకోండి: