ಬೆಂಗಳೂರು ಮತ್ತು ಕರ್ನಾಟಕದಲ್ಲಿ ಭಯೋತ್ಪಾದನೆ ಸಂಬಂಧಿತ ಚಟುವಟಿಕೆ ಹೆಚ್ಚಳವಾಗುತ್ತಿವೆ ಎನ್ನುವ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿಕೆಗೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
"ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಕೆಲ ಮಂದಿ ಡಿಜೆ ಹಳ್ಳಿ ಘಟನೆ ನಂತರ ಸಿಕ್ಕಿ ಬಿದ್ದಿದ್ದರು. ಹೀಗಾಗಿ ನಮ್ಮ ಟೀಕೆ ಉಗ್ರರ ವಿರುದ್ಧ ಇರಬೇಕು. ಆದರೆ, ಕೋಟ್ಯಂತರ ಜನರಿಗೆ ಅನ್ನ, ಆಶ್ರಯ, ಜೀವನ ನೀಡುತ್ತಿರುವ ತಾಯಿಯಂಥ ಊರಿನ ಬಗ್ಗೆ ಅಲ್ಲ. ಬೆಂಗಳೂರಿನಲ್ಲಿ ಉಗ್ರರು ಸಿಕ್ಕಿಬಿದ್ದ ಮಾತ್ರಕ್ಕೆ ಬೆಂಗಳೂರು ಅವರದ್ದಲ್ಲ. ಬೆಂಗಳೂರು ನಮ್ಮದು" ಎಂದು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ.
"ಬೆಂಗಳೂರು ಉಗ್ರರ ಕೇಂದ್ರವಾಗಿದೆ ಎಂಬ ಬಿಜೆಪಿಯೊಳಗಿನ ಕೆಲ ಅಪ್ರಬುದ್ಧರ ಹೇಳಿಕೆ ಬೆಂಗಳೂರಿಗೆ ಮಾಡಿದ ಅಪಮಾನ. ಇಂಥ ಹೇಳಿಕೆಯನ್ನು ಸಮರ್ಥಿಸಲಾಗದೇ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸಂಕಟ ಅನುಭವಿಸಿದ್ದನ್ನು ನಾನು ಮಾಧ್ಯಮದ ಮೂಲಕ ನೋಡಿದೆ. ಈ ಅಪ್ರಬುದ್ಧ ಹೇಳಿಕೆ ಬಿಜೆಪಿಯ ಹಿರಿಯರಿಗೆ ಮಾಡಿದ ಅಪಮಾನವೂ ಹೌದು" -
ಎಚ್ಡಿಕೆ. "ಬೆಂಗಳೂರು ಕೇವಲ ಬಿಬಿಎಂಪಿ ಚುನಾವಣೆ ಮಾತ್ರವಲ್ಲ, ಬೆಂಗಳೂರು 28 ವಿಧಾನಸಭೆ ಕ್ಷೇತ್ರ ಮಾತ್ರವಲ್ಲ, ಬೆಂಗಳೂರು ನಾಲ್ಕು ಲೋಕಸಭೆ ಕ್ಷೇತ್ರ ಮಾತ್ರವಲ್ಲ. ಬೆಂಗಳೂರು ನಮ್ಮೆಲ್ಲರ ಹೆಮ್ಮೆ. ಮತ ಧೃವೀಕರಣಕ್ಕಾಗಿ ಬೆಂಗಳೂರನ್ನೇ ಅಪಮಾನಿಸುವ ಈ ಕ್ಷುಲ್ಲಕ ಹೇಳಿಕೆ ಅಪರಾಧವೇ ಸರಿ. ಈ ಹೇಳಿಕೆ ಸಂಬಂಧ ಬಿಜೆಪಿ ಸಂಬಂಧಿಸಿದವರಿಂದ ಕ್ಷಮೆ ಕೇಳಿಸಬೇಕು" ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
"ಕೆಂಪೇಗೌಡರು ಬಲಿದಾನಗಳ ಮೂಲಕ ನಿರ್ಮಿಸಿದ ಬೆಂಗಳೂರು ಈಗಾಗಲೇ ಜಗದ್ವಿಖ್ಯಾತಿ ಗಳಿಸಿದೆ. ದೇಶದ ಬೇರೆಲ್ಲ ನಗರಗಳಿಗಿಂತ ವೇಗವಾಗಿ ಬೆಳೆಯುತ್ತಿದೆ. ಇದನ್ನು ಸಹಿಸದ ಉತ್ತರ ಭಾರತೀಯ ರಾಜಕೀಯ ಲಾಭಿಯ ಷಡ್ಯಂತ್ರದ ಭಾಗವೇ ಈ ಹೇಳಿಕೆ ಎಂಬ ಅನುಮಾನಗಳೂ ಮೂಡುತ್ತಿವೆ. ಯಾಕೆಂದರೆ ಕೆಲ ಮಂದಿಗೆ ತಾಯ್ನಾಡಿನ ಗೌರವಕ್ಕಿಂತ ಉತ್ತರದ ವ್ಯಾಮೋಹ ಅಧಿಕ"ಎಂದು ಕುಮಾರಸ್ವಾಮಿ, ಟ್ವೀಟ್ ಮೂಲಕ ಅಭಿಪ್ರಾಯ ಪಟ್ಟಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಶುಕ್ರವಾರ ಭೇಟಿ ಮಾಡಿ ಈ ಕುರಿತು ಚರ್ಚಿಸಿ ಮನವಿ ಸಲ್ಲಿಸಲಾಗಿದೆ. ಇದಕ್ಕೆ ಸೂಕ್ತವಾಗಿ ಸ್ಪಂದಿಸಿರುವ ಸಚಿವರು ಬೆಂಗಳೂರಿನಲ್ಲಿ ಎನ್‌ಐ ಕಚೇರಿ ಆರಂಭಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದ್ದರು. ಆದರೆ, ಕೇಂದ್ರ ಸರಕಾರ ಬೆಂಗಳೂರು ಬದಲು, ಚೆನ್ನೈ, ಇಂಪಾಲ್ ಮತ್ತು ರಾಂಚಿಯಲ್ಲಿ, ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಶಾಶ್ವತ ವಿಭಾಗ ತೆರೆಯಲು ನಿರ್ಧರಿಸಿದೆ.
click and follow Indiaherald WhatsApp channel