ಲಖನೌ: ಟೀಂ ಇಂಡಿಯಾದ ಮಹಾಗೋಡೆ ಎಂದೇ ಕರೆಯಲ್ಪಡುವ ಮಾಜಿ ನಾಯಕ ಕನ್ನಡಿಗ ರಾಹುಲ್ ದ್ರಾವಿಡ್ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಅದು ಯಾವ ವಿಚಾರ, ಅಸಮಾಧಾನಕ್ಕೆ ಕಾರಣವೇನು ಎಂಬ ಮಾಹಿತಿ ಇಲ್ಲಿದೆ ನೋಡಿ. 
 
ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಮುಖ್ಯಸ್ಥ ರಾಹುಲ್‌ ದ್ರಾವಿಡ್‌, ಅದ್ದೂರಿ ಟಿ20 ಕ್ರಿಕೆಟ್‌  ಲೀಗ್‌ ಆಗಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಭಾರತೀಯ ಕೋಚ್‌ಗಳಿಗೆ ಸರಿಯಾದ ಅವಕಾಶಗಳು ಸಿಗದೇ ಹೋಗುತ್ತಿರುವುದರ ಕುರಿತಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೌದು ಈ ವಿಷಯವಾಗಿ ಪದೇ ಪದೇ ತಿಳಿಸುತ್ತಿದ್ದಾರೆ.
 
ಭಾರತದಲ್ಲೂ ಹಲವು ಅತ್ಯುತ್ತಮ ಕೋಚ್‌ಗಳು ಮತ್ತು ಅತ್ಯುತ್ತಮ ವ್ಯಕ್ತಿಗಳಿದ್ದಾರೆ. ಅವರ ಸಾಮರ್ಥ್ಯದ ಮೇಲೆ ನನಗೆ ಅಪಾರ ನಂಬಿಕೆ ಇದೆ. ಕ್ರಿಕೆಟ್‌ನಲ್ಲಿ ನಮ್ಮ ಬಳಿ ಹಲವು ಪ್ರತಿಭಾನ್ವಿತ ಆಟಗಾರರು ಇರುವಂತೆ, ತರಬೇತಿ ವಿಭಾಗದಲ್ಲೂ ಹಲವು ಪ್ರತಿಭಾನ್ವಿತರಿದ್ದಾರೆ ಎಂದು ರಾಹುಲ್‌ ದ್ರಾವಿಡ್‌ ಇಎಸ್‌ಪಿಎನ್‌ ಕ್ರಿಕ್‌ಇನ್ಫೋಗೆ ಹೇಳಿಕೆ ನೀಡಿದರು. 
 
ಅದ್ಭುತ ಪ್ರತಿಭೆಗಳಿಗೆ ಆತ್ಮವಿಶ್ವಾಸ ಬರುವಂತೆ ನಾವು ಮಾಡಬೇಕಿದೆ. ಅವರ ಸಾಮರ್ಥ್ಯ ಅನಾವರಣ ಪಡಿಸಲು ಅಗತ್ಯದ ಕಾಲಾವಕಾಶವನ್ನು ನೀಡಬೇಕು. ಎಲ್ಲಕ್ಕಿಂತಲೂ ಮಿಗಿಲಾಗಿ ನಮ್ಮವರಿಗೆ ಐಪಿಎಲ್‌ ಟೂರ್ನಿಯ ಫ್ರಾಂಚೈಸಿ ತಂಡಗಳಲ್ಲಿ ಸಹಾಯಕ ಕೋಚ್‌ಗಳ ಹುದ್ದೆಯೂ ಲಭ್ಯವಾಗದೇ ಇರುವುದು ನನಗೆ ಬೇಸರ ತಂದಿದೆ ಎಂದು ದ್ರಾವಿಡ್‌ ಬೇಸರ ವ್ಯಕ್ತ ಪಡಿಸಿದ್ದಾರೆ. 
 
ಕಳೆದ ವರ್ಷದ ಏಪ್ರಿಲ್‌ನಲ್ಲಿ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಮುಖ್ಯಸ್ಥರಾಗಿ ನೇಮಕಗೊಂಡ ರಾಹುಲ್‌ ದ್ರಾವಿಡ್‌, ಐಪಿಎಲ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ಮತ್ತು ಡೆಲ್ಲಿ ಡೇರ್‌ಡೆವಿಲ್ಸ್‌ ತಂಡಗಳಿಗೆ ಮಾರ್ಗದರ್ಶನ ನೀಡಿದ ಅನುಭವವನ್ನೂ ಹೊಂದಿದ್ದಾರೆ.
 
"ನಿಜವಾಗಿಯೂ ಐಪಿಎಲ್‌ನಲ್ಲಿ ಹೆಚ್ಚು ಭಾರತೀಯ ಆಟಗಾರರೊದ್ದಾರೆ. ಅಂತೆಯೇ ಸ್ಥಲೀಯ ಕೋಚ್‌ಗಳಲ್ಲೂ ಅಪಾರ ಜ್ಞಾನವಿದೆ. ಭಾರತೀಯ ಕೋಚ್‌ಗಳನ್ನು ಬಳಕೆ ಮಾಡಿಕೊಳ್ಳುವ ಮೂಲಕ ಫ್ರಾಂಚೈಸಿ ತಂಡಗಳು ಉತ್ತಮ ಲಾಭ ಪಡೆದುಕೊಳ್ಳಬಹುದು ಎಂಬುದು ನನ್ನ ಅಭಿಪ್ರಾಯ. ಏಕೆಂದರೆ ಭಾರತೀಯ ಆಟಗಾರರನ್ನು ಅವರು ಚೆನ್ನಾಗಿ ಬಲ್ಲವರಾಗಿರುತ್ತಾರೆ. ಸಹಾಯಕ ಕೋಚ್‌ಗಳಲ್ಲಿಯೂ ಸಾಕಷ್ಟು ಪ್ರತಿಭೆಗಳಿದ್ದಾರೆ. ಇವರಿಗೆ ಸೂಕ್ತ ಅವಕಾಶಗಳನ್ನು ನೀಡಿ ಬೆಳೆಯುವಂತೆ ಮಾಡುವ ಅವಶ್ಯಕತೆ ಇದೆ," ಎಂದು ದ್ರಾವಿಡ್‌ ಅಭಿಪ್ರಾಯ ತಿಳಿಸಿದ್ದಾರೆ. 

మరింత సమాచారం తెలుసుకోండి: