ಹ್ಯಾಮಿಲ್ಟನ್: ಸೆಡಾನ್ ಪಾರ್ಕ್ ಅಂಗಳದಲ್ಲಿ ನಡೆದ ಭಾರತ ಮತ್ತು ಕಿವೀಸ್ ನಡುವಿನ ಪ್ರಥಮ ಏಕದಿನ ಪಂದ್ಯವನ್ನು ನ್ಯೂಜಿಲ್ಯಾಂಡ್ ರಾಸ್ ಟೇಲರ್ ಅಬ್ಬರದ ಶತಕದಾಟದ ನೆರವಿನಿಂದ 4 ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನ್ಯೂಝಿಲ್ಯಾಂಡ್ 1-0 ಮುನ್ನಡೆ ಸಾಧಿಸಿದ್ದು, ಭಾರತ ಗೆಲ್ಲಲು ಉಳಿದೆರಡು ಪಂದ್ಯದಲ್ಲಿ ಗೆಲ್ಲಲೇಬೇಕಾಗಿದೆ. 
 
ಟೀಂ ಇಂಡಿಯಾ ನೀಡಿದ 347ರನ್ ಗಳ ಗುರಿಯನ್ನು ಬೆನ್ನಟ್ಟಿದ ಅತಿಥೇಯರಿಗೆ ಓಪನರ್ ಗಳಾದ ಮಾರ್ಟಿನ್ ಗಪ್ಟಿಲ್ 32 ಮತ್ತು ಹೆನ್ರಿ ನಿಕೊಲಸ್ 78 ಅವರು ಉತ್ತಮ ಆರಂಭ ಒದಗಿಸಿದರು. ಇವರ ಪ್ರಥಮ ವಿಕೆಟ್ ಜೊತೆಯಾಟದಲ್ಲಿ 85 ರನ್ ಹರಿದು ಬಂತು. ಈ ಸಂದರ್ಭದಲ್ಲಿ 32ರನ್ ಗಳಿಸಿದ್ದ ಗಪ್ಟಿಲ್ ಔಟಾದರು. ಬಳಿಕ ಬಂದ ಟಾಮ್ ಬ್ಲಂಡೆಲ್ ಅವರು ಕೇವಲ 09 ರನ್ ಗಳಿಸಿ ಕುಲದೀಪ್ ಯಾದವ್ ಬೌಲಿಂಗ್ ಗೆ ಬಲಿಯಾದರು. ಕೀಪರ್ ಟಾಮ್ ಲಾಥಮ್ (69) ಪಂದ್ಯದ ಗತಿಯನ್ನೇ ಬದಲಿಸಿದರು. ಬಿರುಸಿನ ಆಟಕ್ಕಿಳಿದ ಲಾಥಮ್ ಭಾರತೀಯ ಬೌಲರ್ ಗಳನ್ನು ಬೆಂಡೆತ್ತಿದರು. ಕೇವಲ 48 ಎಸೆತಗಳಲ್ಲಿ 08 ಬೌಂಡರಿ ಮತ್ತು 02 ಸಿಕ್ಸರ್ ಸಹಿತ 69 ರನ್ ಬಾರಿಸಿದ ಲಾಥಮ್ ತನ್ನ ತಂಡದ ಗೆಲುವಿಗೆ ಮುನ್ನುಡಿ ಬರೆದರು. 
 
ತಂಡದ ಗೆಲುವಿಗೆ 39 ರನ್ ಅಗತ್ಯವಿದ್ದಾಗ ಬಿರುಸಿನ ಆಟವಾಡುತ್ತಿದ್ದ ಟಾಮ್ ಲಾಥಮ್ 69 ರನ್ ಗಳಿಸಿ ಔಟಾದರೂ ಇನ್ನೊಂದು ತುದಿಯಲ್ಲಿ ಶತಕ ದಾಖಲಿಸಿ ಭರ್ಜರಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದ ಟೇಲರ್ ಅವರು ತಂಡದ ಗೆಲುವನ್ನು ಸರಾಗಗೊಳಿಸಿದರು. ಕೇವಲ 84 ಎಸೆತಗಳಲ್ಲಿ 109 ರನ್ ಗಳಿಸಿ ಔಟಾಗದೇ ಉಳಿದ ರಾಸ್ ಟೇಲರ್ ಅಜೇಯ ಆಟಕ್ಕೆ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದುಬಂತು. ತಮ್ಮ ಈ ಅಜೇಯ ಇನ್ನಿಂಗ್ಸ್ ನಲ್ಲಿ ರಾಸ್ ಟೇಲರ್ 10 ಬೌಂಡರಿ ಹಾಗೂ 4 ಸಿಕ್ಸರ್ ಗಳನ್ನೂ ಸಿಡಿಸಿದ್ದರು. ಅಂತಿಮವಾಗಿ ನ್ಯೂಜಿಲ್ಯಾಂಡ್ 48.1 ಓವರ್ ಗಳಲ್ಲಿ 6 ವಿಕೆಟ್ ಗಳನ್ನು ಕಳೆದುಕೊಂಡು 348 ರನ್ ಕಲೆಹಾಕುವ ಮೂಲಕ 4 ವಿಕೆಟ್ ಗಳ ಗೆಲುವು ಕಂಡಿತು.

మరింత సమాచారం తెలుసుకోండి: