ಇಡೀ ವಿಶ್ವದಾಧ್ಯಂತ ಕೊರೋನಾ ವೈರಸ್ ಇಂದಾಗಿ ಲಕ್ಷಾಂತರ ಮಂದಿಯು ಸಾವನ್ನಪ್ಪಿದ್ದು ಕೋಟ್ಯಾಂತರ ಮಂದಿ ಕೊರೋನಾ ವೈರಸ್ ಹರಡಿದೆ. ಈ ಕೊರೋನಾವೈರಸ್ಗೆ ಔಷಧಿಯನ್ನು ತಯಾರಿಸಲು ಪ್ರಪಂಚದ ವಿವಿಧ ರಾಷ್ಟ್ರಗಳು ಪೈಪೋಟಿಗೆ ಬಿದ್ದವರಂತೆ ಸಂಶೋಧಿಸಲು ಆರಂಭಿಸಿದ್ದಾರೆ. ಇದರಿಂದಾಗಿ ಕೊರೋನಾ ವೈರಸ್ ಗೆ ಆದಷ್ಟು ಬೇಗ ಲಸಿಕೆ ಬರಲಿದೆ ಎಂಬ ಭರವಸೆ ಮೂಡುತ್ತಿದೆ. ಹಾಗಾದರೆ ಕೊರೋನಾ ವೈರಸ್ ಗೆ ತಡೆಗೆ ಔಷಧಿಯನ್ನು ಸಂಶೋಧಿಸುತ್ತಿರುವ ಆ ಕಂಪನಿಗಳು ಯಾವುವು ಗೊತ್ತಾ…?
ಲಸಿಕೆಗಾಗಿ ವಿಶ್ವಾದ್ಯಂತ 140 ಕಂಪನಿಗಳು ಸಂಶೋಧನೆಯಲ್ಲಿ ತೊಡಗಿವೆ. ಭಾರತದಲ್ಲೂ 6ಕ್ಕೂ ಅಧಿಕ ಕಂಪನಿಗಳು ಲಸಿಕೆ ಅಭಿವೃದ್ಧಿಯಲ್ಲಿ ಕಾರ್ಯದಲ್ಲಿವೆ. ಆದರೆ, ಸದ್ಯ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಕಂಪನಿಗಳು ಒಟ್ಟು 11. ಇವುಗಳು ಅಭಿವೃದ್ಧಿಪಡಿಸಿರುವ ಔಷಧಗಳು ಮಾನವರ ಮೇಲೆ ಪ್ರಯೋಗಿಸುವ ಹಂತದಲ್ಲಿವೆ. ಅಂದರೆ ಕ್ಲಿನಿಕಲ್ ಟ್ರಯಲ್ ನಡೆಸಲಾಗುತ್ತಿದೆ. ಸೆಪ್ಟಂಬರ್ ಅಥವಾ ವರ್ಷದ ಕೊನೆಯಲ್ಲಿ ಔಷಧವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಉದ್ದೇಶ ಹೊಂದಿವೆ.
ಆಕ್ಸ್ಫರ್ಡ್ ವಿವಿ ತಂಡ ಆಸ್ಟ್ರಾಜೆನೆಕಾ ಕಂಪನಿಯೊಂದಿಗೆ ಉತ್ಪಾದಿಸುತ್ತಿರುವ ಲಸಿಕೆ ಈಗಾಗಲೇ ಅಂತಿಮ ಹಂತದ ಕ್ಲಿನಿಕಲ್ ಟ್ರಯಲ್ ನಡೆಸುತ್ತಿದೆ. ಇದಕ್ಕೆ ಪೈಪೋಟಿ ನೀಡುತ್ತಿರುವ ಅಮೆರಿಕದ ಮಾಡೆರ್ನಾ ಲಸಿಕೆ ಕೂಡ ಅಂತಿಮ ಹಂತದ ಪರೀಕ್ಷೆಯಲ್ಲಿ ತೊಡಗಿದೆ. ಕರೊನಾಗೆ ಎಲ್ಲರಿಗಿಂತ ಮೊದಲು ಲಸಿಕೆ ಸಿದ್ಧಪಡಿಸುವ ವಿಶ್ವಾಸದಲ್ಲಿದೆ. ಇದಲ್ಲದೇ, ಚೀನಾದ ಆರು ಕಂಪನಿಗಳು ಕ್ಲಿನಿಕಲ್ ಟ್ರಯಲ್ ನಡೆಸುತ್ತಿವೆ. ಯಾವುದೇ ದೇಶಕ್ಕೆ ಹೋಲಿಸಿದರೂ ಚೀನಿ ಕಂಪನಿಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಈ ಸಾಧನೆ ಮಾಡಿವೆ.
ಭಾರತದ ಸಾಧನೆಯೂ ಇದರಲ್ಲಿ ಕಡಿಮೆಯೇನಲ್ಲ. ವಿಶ್ವಕ್ಕೆ ತನ್ನ ಸಾಮರ್ಥ್ಯವನ್ನು ಪರಿಚಯಿಸಲು ಮುಂದಾಗಿದೆ. ಹೈದರಾಬಾದ್ನ ಭಾರತ್ ಬಯೋಟೆಕ್ ಹಾಗೂ ಜೈಡಸ್ ಕ್ಯಾಡಿಲಾ ಕಂಪನಿಗಳು ಕರೊನಾ ರೋಗಿಗಳ ಮೇಲೆ ಲಸಿಕೆ ಪ್ರಯೋಗಿಸಲು ಅನುಮತಿ ಪಡೆದುಕೊಂಡಿವೆ.ಇನ್ನು ಭಾರತ್ ಬಯೋಟೆಕ್ನ ಲಸಿಕೆಗಂತೂ ಐಸಿಎಂಆರ್ ಸಹಯೋಗ ನೀಡುತ್ತಿದೆ. ಆದರೆ, ಐಸಿಎಂಆರ್ ಹೇಳಿದಂತೆ ಆಗಸ್ಟ್ 15ರ ವೇಳೆಗೆ ಲಸಿಕೆ ಸಜ್ಜಾಗುವುದು ಕಷ್ಟಸಾಧ್ಯವಾದರೂ, ಇದು ಕೊನೆಯ ಹಂತದ ಆರಂಭ ಎಂದೇ ವಿಶ್ಲೇಷಿಸಲಾಗುತ್ತಿದೆ.
ಹೇಗೆ ಇರಲಿ, ವರ್ಷಾಂತ್ಯಕ್ಕೆ ಲಸಿಕೆ ಒಂದಕ್ಕಿಂತ ಹೆಚ್ಚು ಲಸಿಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿರುವುದಂತೂ ಖಚಿತ. ಜಾಗತಿಕವಾಗಿ ಪೈಪೋಟಿಯಲ್ಲಿರುವ 11 ಲಸಿಕೆಗಳಲ್ಲಿ ಕನಿಷ್ಠ ನಾಲ್ಕು ಅಂದರೆ, ಆಕ್ಸ್ಫರ್ಡ್, ಮಾಡೆರ್ನಾ ಹಾಗೂ ಭಾರತದ ಎರಡು ಔಷಧ ಸ್ಥಳೀಯವಾಗಿ ಉತ್ಪಾದನೆಯಾಗಲಿವೆ. ಈ ಮೂಲಕ ಬೇರೆಯವರ ಮೇಲಿನ ಅವಲಂಬನೆಯನ್ನು ತಗ್ಗಿಸಲಿವೆ.
click and follow Indiaherald WhatsApp channel