ನವದೆಹಲಿ: ರಾಷ್ಟ್ರವನ್ನೇ ಹೊತ್ತಿ ಉರಿಯುವಂತ ಸಿಎಎ ಪರ-ವಿರೋಧ ಪ್ರತಿಭಟನೆ ವೇಳೆ ಈಶಾನ್ಯ ದಿಲ್ಲಿಯಲ್ಲಿ ಕಳೆದೆರಡು ದಿನಗಳಿಂದ ಭುಗಿಲೆದ್ದ ಹಿಂಸಾಚಾರ ತಡೆಗಟ್ಟುವಲ್ಲಿ ಕೇಂದ್ರ ಸರಕಾರ ಹಾಗೂ ದಿಲ್ಲಿ ಸರಕಾರ ಸಂಪೂರ್ಣ ವಿಫಲವಾಗಿವೆ ಎಂದು ಟೀಕಿಸಿರುವ ಪ್ರತಿಪಕ್ಷಗಳು,ಇದರ ಹಿಂದೆ ದೊಡ್ಡ ಪಿತೂರಿ ಅಡಗಿದೆ ಎಂದು ಗುಡುಗಿದ್ದಾರೆ. 
 
ಇದೊಂದು ಪೂರ್ವಯೋಜಿತ ಕೃತ್ಯ ಎಂದು ಟೀಕಿಸಿರುವ ಕಾಂಗ್ರೆಸ್‌, ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜೀನಾಮೆಗೆ ಆಗ್ರಹಿಸಿದೆ. ಸದ್ಯ ದಿಲ್ಲಿಯ ಪರಿಸ್ಥಿತಿ 2002ರ ಗೋಧ್ರೋತ್ತರ ಗಲಭೆಯನ್ನು ನೆನಪಿಸುವಂತಿದೆ ಎಂದು ಸಿಪಿಐ(ಎಂ) ಆರೋಪಿಸಿದೆ. ಈ ಮಧ್ಯೆ ಬಿಜೆಪಿಯು ಕಾಂಗ್ರೆಸ್‌ ಹಿಂಸಾಚಾರವನ್ನು ರಾಜಕೀಯಗೊಳಿಸುತ್ತಿದ್ದು, ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಎದಿರೇಟು ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ. 
 
ಭಾರೀ ಹಿಂಸಾಚಾರದಲ್ಲಿ 27ಜೀವಗಳು ಬಲಿಯಾಗಿದ್ದರೂ ಪರಿಸ್ಥಿತಿ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದಿಲ್ಲ. ಪೊಲೀಸ್‌ ಹಾಗೂ ಇತರ ಭದ್ರತಾ ಪಡೆಗಳನ್ನು ಸಮರ್ಥವಾಗಿ ಬಳಸಿಕೊಳ್ಳದಿರುವುದು ಕೇಂದ್ರ ಸರಕಾರದ ಸಂಪೂರ್ಣ ವೈಫಲ್ಯವಾಗಿದೆ ಎಂದು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿ.ಡಬ್ಲ್ಯೂ.ಸಿ) ನಿರ್ಣಯ ಕೈಗೊಂಡಿದೆ. ಈ ಗಲಭೆಗಳ ಹಿಂದೆ ಪಿತೂರಿ ಇದೆ ಎಂದು ಟೀಕಿಸಿದೆ. ಸಿಡಬ್ಲ್ಯೂಸಿ ಸಭೆ ಬಳಿಕ ಮಾತನಾಡಿದ ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿ, ‘ದಿಲ್ಲಿ ಚುನಾವಣೆ ವೇಳೆ ಹಾಗೂ ನಂತರದಲ್ಲಿ ಬಿಜೆಪಿ ನಾಯಕರು ನೀಡಿದ ಪ್ರಚೋದನಾಕಾರಿ ಹೇಳಿಕೆಗಳೇ ಈಶಾನ್ಯ ದಿಲ್ಲಿ ಹೊತ್ತಿ ಉರಿಯಲು ಕಾರಣವಾಗಿದೆ. ಕೇಂದ್ರವಷ್ಟೇ ಅಲ್ಲದೇ ದಿಲ್ಲಿ ಸರಕಾರವೂ ಇಲ್ಲಿ ಎಡವಿದೆ. ನೈತಿಕ ಜವಾಬ್ದಾರಿ ಹೊತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಈ ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು. ರಾಷ್ಟ್ರಪತಿ ಭವನದವರೆಗೆ ನಡೆಸಲು ಉದ್ದೇಶಿಸಲಾಗಿದ್ದ ಪ್ರತಿಭಟನಾ ಮೆರವಣಿಗೆಯನ್ನು ಕಾಂಗ್ರೆಸ್ ಮೂಂದೂಡಿದ್ದು ಇದೀಗ ಏನಾಗುತ್ತದೆ ಎಂಬ ಕುತೂಹಲ ಕಾಡುತ್ತಿದೆ. 
 
ಸಿಡಬ್ಲ್ಯೂಸಿ ಸಭೆ ಬಳಿಕ ಕಾಂಗ್ರೆಸ್‌ ಪ್ರಧಾನ ಕಾರ‍್ಯದರ್ಶಿ ಪ್ರಿಯಾಂಕಾ ವಾದ್ರಾ ಅವರು ಪಕ್ಷದ ಕಚೇರಿಯಿಂದ ಗಾಂಧಿ ಸ್ಮೃತಿವರೆಗೂ ಶಾಂತಿ ಮೆರವಣಿಗೆ ನಡೆಸಿದರು. ಈ ಮಧ್ಯೆ ದಿಲ್ಲಿಯಲ್ಲಿನ ಪರಿಸ್ಥಿತಿಯನ್ನು ವಿಶ್ವಸಂಸ್ಥೆ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ವಿಶ್ವಸಂಸ್ಥೆ ಮಹಾ ಕಾರ‍್ಯದರ್ಶಿ ಆ್ಯಂಟೊನಿಯೊ ಗುಟೆರ್ರೆಸ್‌ ಅವರ ವಕ್ತಾರರ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ.

Find out more: