ರಾಜ್ಯದಲ್ಲಿ ದಿನಕಳೆದಂತೆ ಕನ್ನಡದ ಸರ್ಕಾರಿ ಶಾಲೆಗಳನ್ನು ಮುಚ್ಚುವ ಕೆಲಸಗಳು ಸದ್ದಿಲ್ಲದೇ ನಡೆದಿದೆ. ಕೆಲವು ಕಾಣದ ಕೈಗಳು ಮತ್ತೇನನ್ನೋ  ಮಾಡಲು ಹೊರಟಿವೆ. ಕಳೆದೊಂದು ವರ್ಷದ ಹಿಂದೆ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ಮೂಲಕ ಗಡಿನಾಡಿನ ಕನ್ನಡ ಶಾಲೆಯ ಬವಣೆಯನ್ನು ತೆರೆದಿಟ್ಟ ನಿರ್ದೇಶಕ ರಿಷಭ್ ಶೆಟ್ಟಿ ಮೈಸೂರಿನ ಎನ್‌ಟಿಂಎಎಸ್‌ ಶಾಲೆಯ ಬೆಂಬಲಕ್ಕೆ ನಿಂತಿದ್ದಾರೆ.


ಸಾಂಸ್ಕೃತಿಕ ನಗರಿ ಮೈಸೂರಿನ ಎನ್‌ಟಿಂಎಎಸ್‌ ಶಾಲೆ, ಮೊದಲ ಬಾಲಕಿಯರ ಶಾಲೆ. 138 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಈ ಶಾಲೆಯನ್ನು ಮುಚ್ಚದಂತೆ ರಾಜ್ಯದ ಎಲ್ಲ ಕನ್ನಡ ಪರ ಹೋರಾಟಗಾರರು ಬೆಂಬಲ ನೀಡಬೇಕು ಎಂದು ಚಲನಚಿತ್ರ ನಿರ್ದೇಶಕ ನಟ ರಿಷಬ್‌ ಶೆಟ್ಟಿ ಮನವಿ ಮಾಡಿದ್ದಾರೆ. ವಿಡಿಯೋ ಮೂಲಕ ಸಂದೇಶ ನೀಡಿರುವ ಅವರು, 1881 ರಲ್ಲಿ ಮೈಸೂರು ಮಹಾರಾಜರು ಜಾಗ ಕೊಟ್ಟು, ಅಲ್ಲಿ ಶಾಲೆ ತೆರೆಯಲು ಅವಕಾಶ ಮಾಡಿಕೊಟ್ಟಿದ್ದರು. ಇಷ್ಟು ಸುದೀರ್ಘ ಕಾಲವಾಗಿದ್ದರೂ ಕಟ್ಟಡ ಗಟ್ಟಿಮುಟ್ಟಾಗಿದೆ. ಇದನ್ನು ಮುಚ್ಚದಂತೆ ನಡೆಯುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದ್ದಾರೆ. ಹಲವಾರು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ.

ಒಂದು ಹಂತದಲ್ಲಿ ಈ ಶಾಲೆಯಲ್ಲೂ ಮಕ್ಕಳ ಸಂಖ್ಯೆ ಕ್ಷೀಣಿಸಿದ್ದರೂ ಕನ್ನಡ ಮಾಧ್ಯಮ ಶಾಲೆಗೆ ಪ್ರಾಶಸ್ತ್ಯ ನೀಡುವ ನಿಟ್ಟಿನಲ್ಲಿ ಸುತ್ತಮುತ್ತಲಿನ ಜನರು ತಮ್ಮ ಮಕ್ಕಳನ್ನು ಅಲ್ಲಿಗೆ ಸೇರಿಸಿದ್ದರು. ಈಗ ಸಾಕಷ್ಟು ವಿದ್ಯಾರ್ಥಿ ಗಳ ಸಂಖ್ಯೆ ಇರುವುದು ಗಮನಾರ್ಹ ಎಂದಿದ್ದಾರೆ. ಕನ್ನಡ ಶಾಲೆಯನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿ ಆಗಿದೆ. ಮೈಸೂರಿನವರು ಮಾತ್ರವಲ್ಲದೆ, ರಾಜ್ಯದ ಎಲ್ಲ ಜನರೂ ಈ ಶಾಲೆ ಮುಚ್ಚದಂತೆ ನಡೆಯುತ್ತಿರುವ ಹೋರಾಟಕ್ಕೆ ಕೈಜೋಡಿಸಬೇಕು. ಸರ್ಕಾರ ಕೂಡ ಈ ಶಾಲೆಯನ್ನು ಮುಚ್ಚದೆ ಕಾಪಾಡಿ ಕೊಂಡು, ಅದಕ್ಕೆ ಅಗತ್ಯವಾದ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರ ಸಲಹೆ ನೀಡಿದ್ದಾರೆ. 


ಕರ್ನಾಟಕದಲ್ಲಿಯೇ ಕನ್ನಡ ಶಾಲೆಗಳು ಮುಚ್ಚುತ್ತಿರುವುದು ನಿಜಕ್ಕೂ ದುರಂತ. ರಿಷಬ್ ಅವರು ಹೋರಾಟದ ಮೂಲಕ ಉಳುವಿಗೆ ಕರೆ ಕೊಟ್ಟಿರುವುದು ನಿಜಕ್ಕೂ ಸ್ವಾಗತಾರ್ಹ ಕೆಲಸ.


మరింత సమాచారం తెలుసుకోండి: