ಬೆಳಗಾವಿ: ಜನರನ್ನು ಆಳಲು ನೀವು ಅಯೋಗ್ಯರು, ಅನರ್ಹರು ಮತ್ತು ನಾಲಾಯಕರು ಎಂದು ಮಾಜಿ ಸಚಿವೆ ಉಮಾಶ್ರೀ, ಅನರ್ಹ ಶಾಸಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮತಯಾಚನೆ ನಡೆಸಿದ್ದಾರೆ. 
 
ಬೆಳಗಾವಿ ಜಿಲ್ಲೆಯ ಸಾಹುಕಾರನ ಕ್ಷೇತ್ರವಾದ ಗೋಕಾಕ್​ ಕ್ಷೇತ್ರದ ಮಲ್ಲಾಪುರ ಪಿ.ಜಿ. ಉಪಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಜನಪ್ರತಿನಿಧಿಯಾಗಲು ಇವರು ಯೋಗ್ಯರಲ್ಲ ಎಂದು ಮಾಜಿ ಸ್ಪೀಕರ್​ ರಮೇಶ್ ಕುಮಾರ್ ತೀರ್ಮಾನ ಮಾಡಿದ್ದಾರೆ. ಸುಪ್ರೀಂಕೋರ್ಟ್ ಸಹ ರಮೇಶ್ ಕುಮಾರ್ ತೀರ್ಪು ಸರಿ ಇದೆ ಎಂದಿದೆ. ಈಗ ಜನತಾ ನ್ಯಾಯಾಲಯ ತೀರ್ಪು‌ ನೀಡಬೇಕಾಗಿದೆ, ಜನರೇ ಅಂತಿಮ. ಒಪ್ಪುತ್ತಾರಾ ಇಲ್ಲವಾ ಎಂಬುದು ಜನರೇ ನಿರ್ಧರಿಸಲು ಎಂದಿದ್ದಾರೆ. 
 
ಮುಂದುವರೆದು, ರಮೇಶ್ ಅಣ್ಣಾ… ನಾನಿದನ್ನು ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ. ನಿಜವಾಗಿಯು ಬಿಜೆಪಿ ನಾಯಕರು ಅನರ್ಹರು ಹಾಗೂ ಅಸಮರ್ಥರು. ಅಂತಹ ಪಕ್ಷಕ್ಕೆ ಹೋಗಿ ನೀವು ಅನರ್ಹರು ಅನಿಸಿಕೊಂಡಿರಲ್ಲ ಎಂದು ಕುಟುಕಿದರು. ಜನರಿಗೆ ಏನು ಮಾಡಿದ್ದೀರಿ ಅಂತಾ ಬಿಜೆಪಿಯವರು ವೋಟ್ ಕೇಳ್ತಿದ್ದಾರೆ ಸಿದ್ದರಾಮಯ್ಯ ನೀಡಿದ್ದ ಅನ್ನಭಾಗ್ಯ, ಶಾದಿಭಾಗ್ಯ ಯೋಜನೆ ವಿರೋಧಿಸಿದ್ದ ಬಿಎಸ್‌ವೈ, ಕೆಜೆಪಿಯಲ್ಲಿದ್ದಾಗ ಟೋಪಿ ಹಾಕಿಕೊಂಡು ಟಿಪ್ಪು ಜಯಂತಿ ಮಾಡಿದ್ದರು. ಈಗ ಬಿಜೆಪಿಗೆ ಬಂದ ಮೇಲೆ ಬೇಡವೆಂದರು. ಬಿಜೆಪಿಯವರಿಗೆ ಎರಡು ಮುಖ ಇದೆ. ಅಧಿಕಾರ ಹಿಡಿಯೋದಷ್ಟೇ ಬಿಜೆಪಿಯವರಿಗೆ ಬೇಕಾಗಿರುವುದು ಎಂದು ಸಿಎಂ ಬಿಎಸ್‌ವೈ ವಿರುದ್ಧ ಉಮಾಶ್ರೀ ವಾಗ್ದಾಳಿ ನಡೆಸಿದರು.
 
ಬಿಜೆಪಿ ಪೂರ್ಣವಾಗಿ ಅಧಿಕಾರಕ್ಕೆ ಬಂದಿಲ್ಲ. ಅವರಿಗೆ ಬಹುಮತಲಿಲ್ಲ. ಬದಲಾಗಿ 105 ಸೀಟ್ ಮಾತ್ರ ಸಿಕ್ಕಿದೆ. ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರಬಾರದೆಂದು ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಹೆಚ್‌ಡಿಕೆ ರನ್ನು ಸಿಎಂ ಮಾಡಿದ್ವಿ. ಆದರೆ ಶಾಸಕರಿಗೆ ಆಸೆ-ಆಮಿಷ ತೋರಿಸಿ ಅವರನ್ನು ಖರೀದಿಸಿ ಒಂದು ಸರ್ಕಾರವನ್ನು ಕೆಡವಿದರು. ಅಲ್ಲದೆ, ಗೋಕಾಕ್‌ನಲ್ಲಿಯೂ ಒಂದು ಸಂಸಾರವನ್ನು ಒಡೆದರು. ಒಂದೇ ತಾಯಿಯ ಮಕ್ಕಳನ್ನು ಬೇರೆ ಬೇರೆ ಮಾಡಿದರು. ಅಣ್ಣ-ತಮ್ಮರ ಮಧ್ಯೆ ಅಸಮಾಧಾನ ಇದ್ದೇ ಇರುತ್ತದೆ. ಆದರೆ, ಆಸೆ ತೋರಿಸಿದವರ ಹಿಂದೆ ಓಡಿ ಹೋದರು ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿ‌ ವಿರುದ್ಧ ಉಮಾಶ್ರೀ ಗುಡುಗಿದರು.

మరింత సమాచారం తెలుసుకోండి: