ಬೆಂಗಳೂರು: ನೂತನ ಸಚಿವರಿಗೆ ಸೋಮವಾರ ಖಾತೆ ಹಂಚಿಕೆ ಮಾಡುವುದಾಗಿ ಮುಖ್ಯ ಮಂತ್ರಿ ಯಡಿಯೂರಪ್ಪ ಹೇಳಿದ್ದರು. ಆದರೆ ಬಯಸಿದ ಖಾತೆ ನೀಡಿ ಎಲ್ಲರನ್ನೂ ಸಮಾಧಾನ ಪಡಿಸುವ ಸಾಧ್ಯತೆ ಕಡಿಮೆಯಾಗಿದ್ದು, ಸಿಕ್ಕಿದ್ದೆ ‘ಮಹಾ ಪ್ರಸಾದ’ ಎಂದು ಹೊಸ ಸಚಿವರು ಸ್ವಯಂ ಸಂತೈಸಿಕೊಳ್ಳುವ ಸನ್ನಿವೇಶ ಸೃಷ್ಟಿಯಾಗಿದೆ.
 
ಸಂಪುಟ ವಿಸ್ತರಣೆಯಾದ ಬಳಿಕವೂ ಜಲಸಂಪನ್ಮೂಲ ಖಾತೆಗಾಗಿ ರಮೇಶ್‌ ಜಾರಕಿಹೊಳಿ, ಬೆಂಗಳೂರು ಸಹಿತ ನಗರಾಭಿವೃದ್ಧಿ, ಸಾರಿಗೆಯಂಥ ಮಹತ್ವದ ಖಾತೆಗಾಗಿ ಎಸ್‌.ಟಿ ಸೋಮಶೇಖರ್‌, ಬೈರತಿ ಬಸವರಾಜ್‌, ಗೃಹ ಖಾತೆಗಾಗಿ ಬಿ ಸಿ ಪಾಟೀಲ್‌, ಇಂಧನಕ್ಕಾಗಿ ಡಾ. ಕೆ ಸುಧಾಕರ್‌ ಪಟ್ಟು ಹಿಡಿದಿದ್ದಾರೆ. ಆದರೆ ಇವರೆಲ್ಲರಿಗೂ ಬಯಸಿದ ಖಾತೆ ನೀಡುವುದಕ್ಕೆ ಸಿಎಂ ಯಡಿಯೂರಪ್ಪ ಸಿದ್ಧರಿಲ್ಲ. ಜಲ ಸಂಪನ್ಮೂಲ ಬದಲು ಇಂಧನ ಖಾತೆ ನೀಡುವುದಾಗಿ ಜಾರಕಿಹೊಳಿ ಮನವೊಲಿಸಲಾಗುತ್ತಿದೆ. ಆದರೆ ಪಟ್ಟು ಸಡಿಲಿಸದೇ ಇದ್ದರೆ ಬೆಳಗಾವಿ ಜಿಲ್ಲಾಉಸ್ತುವಾರಿ ಹೊರತುಪಡಿಸಿ ಜಲಸಂಪನ್ಮೂಲ ಖಾತೆ ನೀಡುಬಹುದು. 
 
ಇನ್ನು ಬೆಂಗಳೂರು ನಗರಾಭಿವೃದ್ಧಿ ಖಾತೆ ಬಯಸಿದ್ದ ಸಚಿವರ ನಿರೀಕ್ಷೆ ತಪ್ಪಲಿದೆ. ಖಾತೆ ಹಂಚಿಕೆ ಹಿನ್ನೆಲೆಯಲ್ಲಿಈ ಮೊದಲೇ ಸಂಪುಟ ಸೇರಿದ ಕೆಲವರು ಅಸಮಾಧಾನ ಗೊಂಡಿದ್ದಾರೆ. ಹೆಚ್ಚುವರಿ ಖಾತೆಗಳು ಹೊಸಬರಿಗೆ ಹಂಚಿಕೆಯಾಗುತ್ತದೆ ಎಂಬ ಬೇಸರ ಇವರನ್ನು ಕಾಡುತ್ತಿದೆ. ಹೀಗಾಗಿ ಎಲ್ಲರನ್ನೂ ಸಮಾಧಾನಗೊಳಿಸುವ ಖಾತೆ ಹಂಚಿಕೆ ಮಾಡುವ ಜವಾಬ್ದಾರಿ ಯಡಿಯೂರಪ್ಪ ಮೇಲಿದೆ. ಹೀಗಾಗಿ ಈ ಖಾತೆ ಅವರ ಬಳಿಯಲ್ಲೇ ಉಳಿಯುವ ಸಾಧ್ಯತೆ ಗಳು ಹೆಚ್ಚಿವೆ. 
 
​ಸಂಭಾವ್ಯ ಖಾತೆಗಳ ಪಟ್ಟಿ: 
ಎಸ್‌ಟಿ ಸೋಮಶೇಖರ್‌: ಸಾರಿಗೆ ಅಥವಾ ಸಹಕಾರ
ರಮೇಶ್‌ ಜಾರಕಿಹೊಳಿ: ಜಲಸಂಪನ್ಮೂಲ ಅಥವಾ ಇಂಧನ
ಡಾ. ಕೆ ಸುಧಾಕರ್‌: ವೈದ್ಯ ಶಿಕ್ಷಣ
ಬೈರತಿ ಬಸವರಾಜ್‌: ಹಿಂದುಳಿದ ವರ್ಗಗಳ ಕಲ್ಯಾಣ ಅಥವಾ ನಗರಾಭಿವೃದ್ಧಿ
ಕೆ ಗೋಪಾಲಯ್ಯ: ಕಾರ್ಮಿಕ
ಶಿವರಾಂ ಹೆಬ್ಬಾರ್‌: ಪೌರಾಡಳಿತ ಅಥವಾ ತೋಟಗಾರಿಕೆ
ಬಿಸಿ ಪಾಟೀಲ್‌: ಆಹಾರ ಮತ್ತು ನಾಗರಿಕ ಪೂರೈಕೆ, ಬಂಧಿಖಾನೆ ಅಥವಾ ಅರಣ್ಯ
ನಾರಾಯಣಗೌಡ: ಪ್ರವಾಸೋದ್ಯಮ ಅಥವಾ ಸಣ್ಣ ನೀರಾವರಿ.
ಆನಂದ್‌ ಸಿಂಗ್‌: ಕೌಶಲ್ಯಾಭಿವೃದ್ಧಿ, ಯುವಜನಸೇವೆ ಮತ್ತು ಕ್ರೀಡೆ
ಶ್ರೀಮಂತ ಪಾಟೀಲ್‌: ಸಕ್ಕರೆ.

మరింత సమాచారం తెలుసుకోండి: