ಹೌದು ಹಿಂದಿ ದಿವಸ್ ಆಚರಣೆ ಹಾಗೂ ಹಿಂದಿ ಹೇರಿಕೆಗೆ ಕರ್ನಾಟಕದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಕನ್ನಡ ಸಿನಿಮಾ ನಟ ಹಾಗು ನಿರ್ದೇಶಕರು ಸೇರಿದಂತೆ ಅನೇಕರು ಬಲವಂತವಾಗಿ ಹಿಂದಿ ಹೇರಿಕೆ ಮಾಡುತ್ತಿರುವುದನ್ನು ಖಂಡಿಸಿದ್ದಾರೆ.
ಆ ದಿನಗಳು' ಖ್ಯಾತಿಯ ಚೇತನ್, ಪ್ರಕಾಶ್ ರಾಜ್, ಧನಂಜಯ್, ಕವಿರಾಜ್ ಸೇರಿದಂತೆ ಹಲವರು ಹಿಂದಿ ಹೇರಿಕೆ ವಿರುದ್ಧ ಪ್ರತಿಭಟಿಸಿ ಟ್ವೀಟ್ ಮಾಡಿದ್ದಾರೆ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಟ್ವೀಟ್ ಮಾಡಿ ಹಿಂದಿ ಹೇರಿಕೆ ವಿರುದ್ಧ ಸಿಡಿದೆದಿದ್ದಾರೆ. 'ನಮ್ಮ ಕೊನೆಯುಸಿರಿರುವವರೆಗೂ ಕನ್ನಡ ಪರವಾಗಿ ನಿಲ್ಲುತೇವೆ' ಎನ್ನುವ ಮೂಲಕ ಕನ್ನಡ ಪರ ನಿಂತಿದ್ದಾರೆ.
ಇದೀಗ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಟ್ವೀಟ್ ಮಾಡಿ ಹಿಂದಿ ಹೇರಿಕೆಯನ್ನು ಖಂಡಿಸಿದ್ದಾರೆ. 'ಅಮ್ಮ' ಪದದಿಂದ 'ಅ' ತೆಗೆದು 'ಮಾ' ಉಳಿಸುವ ನಿಮ್ಮ ಪ್ರಯತ್ನಕ್ಕೆ ಧಿಕ್ಕಾರವಿರಲಿ ಎಂದು ಹೇಳಿದ್ದಾರೆ.
ಈ ಬಗ್ಗೆ ರಿಷಬ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ, "ಸುಲಿದಿತ್ತ ರಸಬಾಳೆಯಷ್ಟು ಸುಲಲಿತವಾದ ಭಾಷೆ ನಮ್ಮದಿರುವಾಗ, ಇನ್ನೊಂದು ಭಾಷೆಯ ಅಗತ್ಯವಾದರೂ ಏನು? ನಾವು ಕನಸು ಕಾಣೋ ಭಾಷೆ, ನಮ್ಮ ನಾಲಿಗೆಯಲಾಡಲು ಬಿಡಿ. ಓಲೈಸುವ ನೆಪದಿ ನಮ್ಮ ಕಂದಮ್ಮಗಳಾಡೋ 'ಅಮ್ಮ' ಪದದಿಂದ 'ಅ' ತೆಗೆದು 'ಮಾ' ಉಳಿಸುವ ನಿಮ್ಮ ಪ್ರಯತ್ನಕ್ಕೆ ಧಿಕ್ಕಾರವಿರಲಿ." ಎಂದು ಹೇಳುವ ಮೂಲಕ ಬಲವಂತವಾಗಿ ಹಿಂದಿ ಹೇರಿಕೆ ಮಾಡುತ್ತಿರುವುದನ್ನು ಖಂಡಿಸಿದ್ದಾರೆ.
'ಹಲವು ಭಾಷೆ ಬಲ್ಲೆ.. ಹಲವು ಭಾಷೆಗಳಲ್ಲಿ ಕೆಲಸ ಮಾಡಬಲ್ಲೆ..ಆದರೆ ನನ್ನ ಕಲಿಕೆ..ನನ್ನ ಗ್ರಹಿಕೆ..ನನ್ನ ಬೇರು..ನನ್ನ ಶಕ್ತಿ...ನನ್ನ ಹೆಮ್ಮೆ..ನನ್ನ ಮಾತೃಭಾಷೆ ಕನ್ನಡ. ಹಿಂದಿ ಹೇರಿಕೆ ಬೇಡ..NO'' ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ. ಇನ್ನೂ ''ನನ್ನ ದೇಶ ಭಾರತ ನನ್ನ ಬೇರು ಕನ್ನಡ ಎಲ್ಲ ಭಾಷೆಯನ್ನು ಗೌರವಿಸುತ್ತೇನೆ ನನ್ನ ಭಾಷೆಯನ್ನು ಹೆಚ್ಚು ಪ್ರೀತಿಸುತ್ತೇನೆ ಯಾವುದೇ ಹೇರಿಕೆ ಸಲ್ಲದು'' ಎಂದು ನಟ ಧನಂಜಯ್ ಟ್ವೀಟ್ ಮಾಡಿದ್ದಾರೆ.
click and follow Indiaherald WhatsApp channel