ನವದೆಹಲಿ: ಪ್ರಸ್ತುತ ರಾಷ್ಟ್ರಾದ್ಯಂತ ಪೌರತ್ವ ಕಾಯ್ದೆ ವಿರೋಧಿಯಾಗಿ ಪ್ರತಿಭಟನೆ ಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು, ರಾಷ್ಟ್ರವೇ ಗಲಭೆ, ಅಶಾಂತಿಯಲ್ಲಿ ಮುಳುಗಿದೆ. ಕಾಂಗ್ರೆಸ್, ಪ್ರಮುಖ ಪ್ರತಿಪಕ್ಷಗಳು ವಿರೋಧಿಸಿವೆ. ಕಾಯ್ದೆಯಾಗಲೇ ಬೇಕೆಂದು ಪಣತೊಟ್ಟಿರುವ ಬಿಜೆಪಿ ಇದೀಗ 2003ರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪೌರತ್ವ ಕಾಯ್ದೆ ಪರ ವಾದಿಸಿರುವ ಕುರಿತ ವೀಡಿಯೋ ಲೀಕ್ ಮಾಡಿದೆ.
 
2003ರಲ್ಲಿ ಪೌರತ್ವ ಕಾಯ್ದೆಯನ್ನು ಬೆಂಬಲಿಸಿ ಮನಮೋಹನ್ ಸಿಂಗ್ ಮಾತನಾಡಿದ್ದರು. ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಕಾಯ್ದೆ ಅಗತ್ಯವಾಗಿದೆ ಎಂದು ಹೇಳಿದ್ದರು. ಮನಮೋಹನ್ ಸಿಂಗ್ ಪೌರತ್ವ ಕಾಯ್ದೆ ಬಗ್ಗೆ ಮಾತನಾಡಿರುವ ವಿಡಿಯೋ ಫೂಟೇಜ್ ಅನ್ನು ಬಿಜೆಪಿ ಬಿಡುಗಡೆ ಮಾಡಿದೆ. ಅಂದು ರಾಜ್ಯಸಭೆಯಲ್ಲಿ ಮಾತನಾಡಿದ್ದ ವಿಪಕ್ಷ ನಾಯಕ ಸಿಂಗ್, ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಬಗ್ಗೆ ಉದಾರತೆ ಬೇಕಾಗಿದೆ. ನೆರೆಯ ದೇಶಗಳಾದ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಕಿರುಕುಳ ಎದುರಿಸುತ್ತಿರುವ ಅಲ್ಪಸಂಖ್ಯಾತರಿಗಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಅಗತ್ಯವಾಗಿದೆ ಎಂದು ಹೇಳಿದ್ದ ವಿಡಿಯೋವನ್ನು ಬಿಜೆಪಿ ಟ್ವೀಟ್ ಮಾಡಿದ್ದು, ರಾಷ್ಟ್ರಾದ್ಯಂತ ಚರ್ಚೆಗೆ ಗ್ರಾಸವಾಗಿದೆ. 
 
“ ಈ ವಿಚಾರವಾಗಿ ಮೇಡಂ ನಾನು ನಿರಾಶ್ರಿತರ ಕುರಿತು ಸ್ವಲ್ಪ ಮಾತನಾಡಬೇಕಾಗಿದೆ. ನಮ್ಮ ದೇಶ ಇಬ್ಭಾಗವಾದ ನಂತರ ಬಾಂಗ್ಲಾದೇಶದಂತಹ ದೇಶಗಳಲ್ಲಿ ಅಲ್ಪಸಂಖ್ಯಾತರ (ಹಿಂದೂ, ಸಿಖ್, ಬೌದ್ಧ, ಪಾರ್ಸಿ) ಸಮುದಾಯಗಳು ಕಿರುಕುಳವನ್ನು ಅನುಭವಿಸಿತ್ತು. ಹೀಗಾಗಿ ಬಲವಂತಕ್ಕೊಳಗಾದ, ದುರದೃಷ್ಟ ಜನರಿಗಾಗಿ ಈ ಸಂದರ್ಭದಲ್ಲಿ ನಮ್ಮ ದೇಶದಲ್ಲಿ ಅವರಿಗೆ ಅವಕಾಶ ಕಲ್ಪಿಸುವುದು ನೈತಿಕ ಹೊಣೆಗಾರಿಕೆಯಾಗಿದೆ. ಇಂತಹ ನತದೃಷ್ಟ ಜನರಿಗೆ ಪೌರತ್ವ ನೀಡುವುದು ಹೆಚ್ಚು ಉದಾರಿತನದ್ದಾಗಿದೆ ಎಂದು ಸಿಂಗ್ 2003ರಲ್ಲಿ ಹೇಳಿದ್ದರು.
 
ಗೌರವಾನ್ವಿತ ಉಪಪ್ರಧಾನಿ (ಎಲ್ ಕೆ ಅಡ್ವಾಣಿ)ಯವರು ಪೌರತ್ವ ಕಾಯ್ದೆಗೆ ಸಂಬಂಧಿಸಿದಂತೆ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂಬ ಆತ್ಮೀಯ ಭರವಸೆ ನನ್ನದಾಗಿದೆ ಎಂದು ಸಿಂಗ್ ಅಭಿಪ್ರಾಯವನ್ನು ಸಹ ವ್ಯಕ್ತಪಡಿಸಿದ್ದರು. ಈ ವಿಡಿಯೋವನ್ನು ಉಪಯೋಗಿಸಿಕೊಂಡ ಬಿಜೆಪಿ, ಪೌರತ್ವ ಕಾಯ್ದೆಯನ್ನು ತೀವ್ರವಾಗಿ ವಿರೋಧಿಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ಕಟುವಾಗಿ ಪ್ರಶ್ನಿಸಿದ್ದು, ಕಾಂಗ್ರೆಸ್ ಗೆ ರಾಷ್ಟ್ರಮಟ್ಟದಲ್ಲಿ ಮುಜುಗರ ಉಂಟಾಗುವಂತೆ ಮಾಡಿದೆ.
 
 
 

మరింత సమాచారం తెలుసుకోండి: