ಇಂದಿನ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗೆ ಆಯ್ಕೆಯ ಸ್ವಾತಂತ್ರ್ಯವೇ ಇಲ್ಲವಾಗಿದೆ. ಕಲೆ, ವಾಣಿಜ್ಯ, ವಿಜ್ಞಾನವೆಂಬ ಪರಿಧಿಯೊಳಗೆ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಇಂದಿನ ಶಿಕ್ಷಣ ಏನಿದ್ದರೂ ಅಂಕಗಳತ್ತ ಗಮನ ಹರಿಸುತ್ತಿವೆ. ಇದು ವಿದ್ಯಾರ್ಥಿಗಳಿಗಿಂತಲೂ ಹೆಚ್ಚಾಗಿ ಪಾಲಕರಿಗೆ ಅಂಕಪಟ್ಟಿ ಎಂಬುದು ಪ್ರತಿಷ್ಠೆಯ ಸಂಕೇತವಾಗಿಬಿಟ್ಟಿದೆ. ಇನ್ನುಮುಂದೆ ಇದಾವುದೂ ಇರಲಾರದು. ಇದೇ ರಾಷ್ಟ್ರೀಯ ಶಿಕ್ಷಣ ನೀತಿ-2020ಯ ವಿಶೇಷತೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದರು.




ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿ 2020ರಡಿಯಲ್ಲಿ , 21ನೇ ಶತಮಾನದಲ್ಲಿ ಶಾಲಾ ಶಿಕ್ಷಣ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಓದಿಗಾಗಿ-ಕಲಿಕೆ, ಕಲಿಕೆಗಾಗಿ ಓದು ಎಂಬ ಉದ್ದೇಶ ಮಕ್ಕಳ ವಿದ್ಯಾರ್ಥಿ ದೆಸೆಯಲ್ಲಿ ಆಗಬೇಕು. ಸಾಕ್ಷರತೆಯ ಬುನಾದಿ ಭದ್ರವಾಗಬೇಕು ಎಂದು ಅವರು ಹೇಳಿದರು.




ಚಿಕ್ಕಮಕ್ಕಳಿಗೆ ನಾಲ್ಕು ಗೋಡೆಗಳ ನಡುವೆ ಶಿಕ್ಷಣ ಇಂದು ಸಿಗುತ್ತಿದೆ. ಆದರೆ ಇದು ಸರಿಯಾದ ಕ್ರಮವಲ್ಲ. ಗೋಡೆಯ ಆಚೆಗಿನ ಪ್ರಪಂಚವನ್ನು ಮಕ್ಕಳು ನೋಡಬೇಕು. ಮಕ್ಕಳಲ್ಲಿ ಗಣಿತಶಾಸ್ತ್ರೀಯ ಮತ್ತು ವೈಜ್ಞಾನಿಕ ಯೋಚನೆಯನ್ನು ಬೆಳೆಸುವ ಕೆಲಸ ನೂತನ ಶಿಕ್ಷಣ ನೀತಿಯಲ್ಲಾಗಬೇಕಿದೆ. ಪೂರ್ವ ತರಗತಿ ಮನೆಯಿಂದ ಹೊರಗಿನ ಅನುಭವ ಪಡೆದುಕೊಳ್ಳಲು ಮಕ್ಕಳಿಗೆ ಮೊದಲ ಹೆಜ್ಜೆಯಾಗಿದೆ ಎಂದು ಪ್ರಧಾನಿ ಹೇಳಿದರು.




ವಿನೋದದ ಮೂಲಕ ಕಲಿಕೆ, ಚಟುವಟಿಕೆ ಮೂಲಕ ಕಲಿಕೆ ಮತ್ತು ಶೋಧನೆ ಮೂಲಕ ಒಂದು ಕೇಂದ್ರಿತವಾಗಿ ಮಕ್ಕಳು ಕಲಿಯಲು ಸಾಧ್ಯವಾಗುವುದು. ಇದನ್ನೆಲ್ಲವನ್ನೂ ಹೊಸ ಶಿಕ್ಷಣ ನೀತಿ ಕಲಿಸಿಕೊಡಲಿದೆ ಎಂದರು.




ನೂತನ ಶಿಕ್ಷಣ ನೀತಿ ನವ ಭಾರತ ಉದಯಕ್ಕೆ ಬೀಜ ಬಿತ್ತಲಿದ್ದು 21ನೇ ಶತಮಾನಕ್ಕೆ ಹೊಸ ದಿಕ್ಕು ನೀಡಬೇಕು, ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ, ಸಹಯೋಗ, ಕುತೂಹಲ ಮತ್ತು ಸಂವಹನ ಪ್ರವೃತ್ತಿ ಮಕ್ಕಳಲ್ಲಿ ಬೆಳೆಸುವ ಕೆಲಸವನ್ನು ಶಿಕ್ಷಕರು ಮಾಡಬೇಕು. ವಿದ್ಯಾರ್ಥಿಗಳು 21ನೇ ಶತಮಾನದಲ್ಲಿ ಈ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.




ನಾಲ್ಕೈದು ವರ್ಷಗಳಲ್ಲಿ ಶಿಕ್ಷಣ ನೀತಿಗೆ ಸಂಬಂಧಪಟ್ಟವರ ಸತತ ಪರಿಶ್ರಮ, ಅವಿರತ ಕಠಿಣ ಕೆಲಸದ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲಾಗುತ್ತಿದೆ. ಇನ್ನೂ ಇದರ ಕೆಲಸ ಮುಗಿದಿಲ್ಲ. ಇದು ಕೇವಲ ಆರಂಭವಷ್ಟೆ. ಇದನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಮಾರ್ಗ ನಮ್ಮ ಮುಂದಿದೆ ಎಂದು ಮೋದಿ ಹೇಳಿದರು.

మరింత సమాచారం తెలుసుకోండి: