ಶೇನ್ ವಾರ್ನ್, ಕ್ರಿಕೇಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದಲ್ಲದೇ ಐಪಿಎಲ್ ನಲ್ಲಿ ರಾಜಸ್ತಾನ್ ರಾಯಲ್ಸ್ ತಂಡದಲ್ಲಿ ಗುರುತಿಸಿಕೊಂಡು ಪ್ರಶಸ್ತಿ ತಂದುಕೊಟ್ಟಿದ್ದರು. ಇದೀಗ ಇದೇ ವಿಚಾರವಾಗಿ ಕೋಟಿ ಕೋಟಿ ರೂಪಾಯಿಗಳನ್ನು ಬಾಚಿಕೊಳ್ಳಲಿದ್ದಾರೆ. ಅದೇಗೆ ಅಂತ ಇಲ್ಲಿದೆ ನೋಡಿ. 
 
ಐಪಿಎಲ್‌ನಲ್ಲಿ 2008ರಿಂದ 2011ರವರೆಗೆ ಆಡಿದ್ದ ಶೇನ್‌ ವಾರ್ನ್‌, ಈ ಸಂದರ್ಭದಲ್ಲಿ ರಾಯಲ್ಸ್‌ ತಂಡದ ಮಾಲೀಕತ್ವದಲ್ಲಿಯೂ ಅಲ್ಬ ಭಾಗವನ್ನು ಹೊಂದಿದ್ದರು. ಹೆರಾಲ್ಡ್‌ ಸನ್‌ ವರದಿ ಮಾಡಿರುವ ಪ್ರಕಾರ, ಶೇನ್‌ ವಾರ್ನ್‌ ಜೊತೆಗೆ ರಾಜಸ್ಥಾನ್‌ ರಾಯಲ್ಸ್‌ ತನ್ನ ತಂಡದ ಪರ ಆಡುವ ವರ್ಷಗಳಲ್ಲಿ ಮಾಲೀಕತ್ವದ ಶೇ. 0.75 ಭಾಗವನ್ನು ಕೂಡ ನೀಡಲಾಗುವುದು ಎಂದು ಒಪ್ಪಂದ ಮಾಡಿಕೊಂಡಿದೆ.
 
"ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಾನು ನಿವೃತ್ತಿ ಹೊಂದಿದ್ದೆ. ಬಳಿಕ ನಿವೃತ್ತಿಯಿಂದ ಹೊರಬಂದು ತಂಡದ ಪರ ಆಡಿದ್ದೆ. ಕೋಚ್‌, ಕ್ಯಾಪ್ಟನ್‌ ಹಾಗೂ ಆಟಗಾರನಾಗಿಯೂ ತಂಡದ ಪರ ಸೇವೆ ಸಲ್ಲಿಸಬೇಕಿತ್ತು. ನನಗೆ ಇಷ್ಟ ಬಂದ ರೀತಿಯಲ್ಲಿ ತಂಡವನ್ನು ಮುನ್ನಡೆಸುವ ಅವಕಾಶ ನೀಡಲಾಗಿತ್ತು. ತಂಡದ ಎಲ್ಲಾ ಸಮಸ್ಯೆಗಳಿಗೆ ನಾನು ಏಕಮಾತ್ರ ಪರಿಹಾರವಾಗಿದ್ದೆ. ಹೀಗಾಗಿ ಇಂಥದ್ದೊಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು," ಎಂದು ಶೇನ್‌ ವಾರ್ನ್‌ ಆಸ್ಟ್ರೇಲಿಯಾದ ದಿನಪತ್ರಿಕೆಯೊಂದಕ್ಕೆ ಹೇಳಿದ್ದಾರೆ. 
 
ಅಂದಹಾಗೆ ರಾಜಸ್ಥಾನ್ ರಾಯಲ್ಸ್‌ ತಂಡದ ಈಗಿನ ಮೌಲ್ಯ ಒಟ್ಟು 200 ಮಿಲಿಯನ್‌ ಡಾಲರ್‌ (1422 ಕೋಟಿ ರೂ.) ಆಗಿದ್ದು, ಇನ್ನೆರಡು ವರ್ಷಗಳಲ್ಲಿ ಇದರ ಮೌಲ್ಯ ದುಪ್ಪಟ್ಟಾಗಲಿದೆ. " 400ಮಿಲಿಯನ್‌ ಡಾಲರ್‌(2844 ಕೋಟಿ ರೂ.)ನಲ್ಲಿ ಶೇ. 3ರಷ್ಟು ಭಾಗ ಕಡಿಮೆ ಮೊತ್ತವೇನೂ ಅಲ್ಲ," ಎಂದು ಶೇನ್‌ ವಾರ್ನ್‌ ತಮಗೆ ಬರಬೇಕಾಗಿರುವ ಬಹು ಕೋಟಿ ರೂಪಾಯಿ ಮೊತ್ತದ ಸುಳಿವು ನೀಡಿದ್ದಾರೆ. ವಾರ್ನ್‌ ಒಟ್ಟು ನಾಲ್ಕು ವರ್ಷಗಳ ಕಾಲ ರಾಜಸ್ಥಾನ್‌ ತಂಡದ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಪ್ರತಿ ವರ್ಷ ತಂಡದ ಮಾಲೀಕತ್ವದಲ್ಲಿ ಶೇ. 0.75ರಷ್ಟು ಭಾಗವೆಂದರೆ ನಾಲ್ಕು ವರ್ಷಕ್ಕೆ ಶೇ. 3ರಷ್ಟು ಭಾಗ ವಾರ್ನ್‌ ಅವರದ್ದಾಗಿದೆ. ಇದೀಗ ವಾರ್ನ್‌ ಅವರ ಲೆಕ್ಕಾಚಾರದಂತೆ ಮುಂದಿನ ವರ್ಷಗಳಲ್ಲಿ ರಾಜಸ್ಥಾನ್ ತಂಡದ ಬ್ರ್ಯಾಂಡ್‌ ಮೌಲ್ಯ 400ಮಿಲಿಯನ್‌ ಡಾಲರ್‌ ಆದರೆ, ಆಸ್ಟ್ರೇಲಿಯಾದ ಸ್ಪಿನ್‌ ದಿಗ್ಗಜನ ಜೇಬಿಗೆ ಬರೋಬ್ಬರಿ 85.32ಕೋಟಿ ರೂ. ಬಂದಿಳಿಯಲಿದೆ.

మరింత సమాచారం తెలుసుకోండి: