ಕೊರೋನಾ ವೈರಸ್ ದಿನದಿಂದ ದಿನಕ್ಕೆ ಸೋಂಕು ಹೆಚ್ಚಾಗುತ್ತಲೇ ಇದ್ದರೂ ಕೂಡ ಅಷ್ಟೇ ಪ್ರಮಾಣದಲ್ಲಿ ಕೋರೋನಾ ಸೋಂಕಿನಿಂದ ಗುಣಮುಖರಾಗುತ್ತಿರುವವರೂ ಕೂಡ ಹೆಚ್ಚಾಗುತ್ತಿದ್ದಾರೆ. ಅದರಂತೆ ಕರ್ನಾಟಕದಲ್ಲೂ ಕೂಡ ಕೊರೋನಾ ಸೋಂಕಿತರಲ್ಲಿ 50%ಕ್ಕಿಂತ ಹೆಚ್ಚಾಗಿ ಕೊರೋನಾ ಸೋಂಕಿತರು ಗುಣಮುಖರಾಗುತ್ತಿದ್ದಾರೆ.
ಹೌದು ಕೊರೊನಾ ಸೋಂಕಿಗೊಳಗಾಗಿ ಗುಣಮುಖರಾದವರ ಪ್ರಮಾಣವು ಒಂದೇ ವಾರದಲ್ಲಿ ರಾಜ್ಯದಲ್ಲಿ ಶೇ.50.72 ಮತ್ತು ಬೆಂಗಳೂರಿನಲ್ಲಿ ಶೇ.50.34 ಕ್ಕೆ ತಲುಪಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಗುರುವಾರ ನಡೆದ ಆನ್ ಲೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಜು.30 ರಂದು ರಾಜ್ಯದ ಗುಣಮುಖರ ಪ್ರಮಾಣ ಶೇ.39.36 ಮತ್ತು ಬೆಂಗಳೂರಿನಲ್ಲಿ ಶೇ.29.51 ರಷ್ಟಿತ್ತು. ಒಂದೇ ವಾರದಲ್ಲಿ ರಾಜ್ಯದಲ್ಲಿ ಶೇ.11.37 ರಷ್ಟು ಮತ್ತು ಬೆಂಗಳೂರಿನಲ್ಲಿ ಶೇ.20.75 ರಷ್ಟು ಹೆಚ್ಚಳವಾಗಿದೆ,'' ಎಂದು ವಿವರಿಸಿದರು.
'ಲಾಕ್ ಡೌನ್ ತೆರವಾದ ನಂತರ ಬೇರೆ ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಕೈಗೊಂಡ ಕಠಿಣ ಕ್ರಮಗಳಿಂದ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಕಡಿಮೆಯಾಗಿದೆ. ಜುಲೈ ನಲ್ಲಿ ಮಾತ್ರ ಸೋಂಕಿತರ ಸಂಖ್ಯೆ ಏರಿಕೆಯಾಗಿತ್ತು,'' ಎಂದು ತಿಳಿಸಿದರು.
'ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಮರಣ ಪ್ರಮಾಣ ಕಡಿಮೆ ಇದೆ. ಕರ್ನಾಟಕದಲ್ಲಿ ಕೊರೊನಾ ಸಾವಿನ ಪ್ರಮಾಣ ಪ್ರತಿ 10 ಲಕ್ಷಕ್ಕೆ 42 ಇದೆ. ನವದೆಹಲಿಯಲ್ಲಿ 204, ಮಹಾರಾಷ್ಟ್ರದಲ್ಲಿ 134, ತಮಿಳುನಾಡಿನಲ್ಲಿ 58, ಪಾಂಡಿಚೆರಿಯಲ್ಲಿ 43 ಮರಣ ಪ್ರಮಾಣ ಇದೆ. ಮುಂಬೈ ನಲ್ಲಿ ಪ್ರತಿ 10 ಲಕ್ಷಕ್ಕೆ 529, ಚೆನ್ನೈ ನಲ್ಲಿ 313, ಪುಣೆಯಲ್ಲಿ 258, ಅಹ್ಮದಾಬಾದ್ ನಲ್ಲಿ 224, ಕೋಲ್ಕತ್ತದಲ್ಲಿ 191 ಮರಣ ಪ್ರಮಾಣ ಇದೆ. ಆದರೆ ಬೆಂಗಳೂರಿನಲ್ಲಿ 121 ಮರಣ ಪ್ರಮಾಣ ಇದೆ,'' ಎಂದು ವಿವರಿಸಿದರು. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಉಪಸ್ಥಿತರಿದ್ದರು.
*ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆರೋಗ್ಯವಾಗಿದ್ದು, ಶೀಘ್ರದಲ್ಲಿ ಬಿಡುಗಡೆಯಾಗಲಿದ್ದಾರೆ. *ಪ್ರಧಾನಿ ನರೇಂದ್ರ ಮೋದಿ ಅವರು ರಾಮಜನ್ಮಭೂಮಿಯಲ್ಲಿ ಪೂಜೆ ನೆರವೇರಿಸಿ ದೇಶಕ್ಕೆ ಒಳಿತು ಬಯಸಿದ್ದಾರೆ. ನಾನು ಕೂಡ ದೇಶ ಕೊರೊನಾ ಮುಕ್ತವಾಗಬೇಕೆಂದು ಪ್ರಾರ್ಥನೆ ಮಾಡಿದ್ದೇನೆ.
*ಆಸ್ಪತ್ರೆಗಳಲ್ಲಿ ಹಾಸಿಗೆ ಖಾಲಿ ಇದೆ. ವೈದ್ಯಕೀಯ ಶಿಕ್ಷಣ ಇಲಾಖೆಯ ಆಸ್ಪತ್ರೆಗಳಲ್ಲಿ 9095 ಹಾಗೂ ಆರೋಗ್ಯ ಇಲಾಖೆಯ ಆಸ್ಪತ್ರೆಗಳಲ್ಲಿ 8490 ಹಾಸಿಗೆಗೆ ಹೈ ಫ್ಲೋ ಆಕ್ಸಿಜನ್ ಅಳವಡಿಸಲಾಗಿದೆ. ಒಟ್ಟು 18,145 ಹಾಸಿಗೆಗಳಲ್ಲಿ ಆಕ್ಸಿಜನ್ ಸೌಲಭ್ಯವಿದೆ.
click and follow Indiaherald WhatsApp channel