ಕೊರೋನಾ ವೈರಸ್ ತಡೆಯುವುದಕ್ಕಾಗಿ ವಿಧಿಸಿದ್ದ ಲಾಕ್ ಡೌನ್ ಅನ್ನು ಸಡಿಲಗೊಳಿಸಿದಾಗಿನಿಂದ ಕೊರೋನಾ ಸೋಂಕು ಹೆಚ್ಚಾಗುತ್ತಲೇ ಇದೆ. ಈ ಕುರಿತು ಕ್ರಮಗೈಗೊಳ್ಳಲು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ನಲ್ಲಿ ಇಂದು ಚರ್ಚಿಸಿದರು. ಅಷ್ಟಕ್ಕೂ ಈ ಚರ್ಚೆಯಲ್ಲಿ ಪ್ರಧಾನಿಗಳು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಹೇಳಿದ್ದೇನು..?
ಮಾರಕ ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಎಲ್ಲರೂ ಮಾಸ್ಕ್ ಧರಿಸಬೇಕು, ಯಾರೂ ಕೂಡ ಮಾಸ್ಕ್ ಧರಿಸದಂತೆ ಹೊರಗೆ ಬರಬಾರದು, ಪಂಜಾಬ್ ರಾಜ್ಯದ ಮಾದರಿಯನ್ನು ಪಾಲಿಸಬೇಕು ಹಾಗೂ ಕೊರೋನ ವೈರಸ್ ವಿರುದ್ಧ ಒಗ್ಗೂಡಿ ಹೋರಾಡುವ ಮತ್ತು ಸಮನ್ವಯದಿಂದ ಶ್ರಮಿಸುವ ಮೂಲಕ ಕೇಂದ್ರ ಮತ್ತು ರಾಜ್ಯಗಳು ಸಹಕಾರಿ ಒಕ್ಕೂಟ ವ್ಯವಸ್ಥೆಯ ಅತ್ಯುತ್ತಮ ಉದಾಹರಣೆಯನ್ನು ತೋರಿಸಿವೆ ಎಂದು ಮಂಗಳವಾರ ಇಲ್ಲಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು,ಉಪರಾಜ್ಯಪಾಲರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಎರಡು ದಿನಗಳ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಅನ್‌ಲಾಕ್-1 ಜೂನ್ 30ರಂದು ಅಂತ್ಯಗೊಳ್ಳಲಿದ್ದು,ಮುಖ್ಯಮಂತ್ರಿಗಳಿಂದ ಮರುಮಾಹಿತಿಗಳ ಆಧಾರದಲ್ಲಿ ಮೋದಿಯವರು ಮುಂದಿನ ನೀತಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ. 'ಭವಿಷ್ಯದಲ್ಲಿ ಎಂದಾದರೂ ಕೊರೋನ ವೈರಸ್ ವಿರುದ್ಧ ಭಾರತದ ಹೋರಾಟವು ವಿಶ್ಲೇಷಿಸಲ್ಪಟ್ಟಾಗ ಪ್ರಸಕ್ತ ಸಮಯವು ನಾವು ಹೇಗೆ ಒಂದಾಗಿ ಶ್ರಮಿಸಿದ್ದೆವು ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಸ್ಮರಿಸಲ್ಪಡಲಿದೆ, ಖಂಡಿತವಾಗಿಯೂ ಇದು ಸಹಕಾರಿ ಒಕ್ಕೂಟ ವ್ಯವಸ್ಥೆಯ ಅತ್ಯುತ್ತಮ ನಿದರ್ಶನವಾಗಿದೆ 'ಎಂದ ಮೋದಿ, ಭಾರತವು ಲಾಕ್‌ಡೌನ್ ಅನ್ನು ಜಾರಿಗೊಳಿಸಿದ ರೀತಿ ಮತ್ತು ಈ ಸಮಯದಲ್ಲಿ ಭಾರತೀಯರು ಪ್ರದರ್ಶಿಸಿದ ಶಿಸ್ತಿನ ಬಗ್ಗೆ ವಿಶ್ವಾದ್ಯಂತ ಖ್ಯಾತ ತಜ್ಞರು ವಿವರವಾಗಿ ಚರ್ಚಿಸುತ್ತಿದ್ದಾರೆ. ಭಾರತದಲ್ಲಿ ಕೋವಿಡ್-19 ರೋಗಿಗಳ ಚೇತರಿಕೆಯ ಪ್ರಮಾಣ ಶೇ.50ಕ್ಕಿಂತ ಹೆಚ್ಚಾಗಿದೆ. ಕೊರೋನ ವೈರಸ್ ಸೋಂಕು ಪೀಡಿತರಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ ದೇಶಗಳ ಪೈಕಿ ಭಾರತವೂ ಒಂದಾಗಿದೆ ಎಂದರು.
ಕೊರೋನಾ ಸೋಂಕು ಹೆಚ್ಚಾಗದಂತೆ ನೋಡಿಕೊಳ್ಳಲು ಇರುವ ಏಕೈಕ ಮಾರ್ಗ ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರುವುದು. ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳು ಪಂಜಾಬ್ ರಾಜ್ಯದ ನೀತಿಯನ್ನು ಮಾದರಿಯಾಗಿ ತೆಗೆದುಕೊಳ್ಳಬೇಕು. ಈ ರಾಜ್ಯದಲ್ಲಿ ಪ್ರತಿಯೊಬ್ಬರು ಮನೆಯಿಂದ ಹೊರ ಬರುವ ಮುನ್ನ ಕಡ್ಡಾಯವಾಗಿ ಮಾಸ್ಕ್ ಧರಿಸುವ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ ಎಂದರು,.
ದೇಶದಲ್ಲಿ ಎಲ್ಲ ಚಟುವಟಿಕೆಗಳು ಆರಂಭವಾಗಿವೆ. ಮನೆಯಿಂದ ಜನರು ಹೊರ ಬರುತ್ತಿದ್ದಾರೆ. ಆರ್ಥಿಕ ವ್ಯವಸ್ಥೆ ಮುಕ್ತವಾಗಿದೆ. ಜನರು ಮನೆಯಿಂದು ಹೊರ ಬರುವ ಮುನ್ನ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಕೊರೊನಾ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜೊತೆ ಜನರು ಭಾಗಿಯಾಗಬೇಕು ಎಂದರು. ಅನ್‍ಲಾಕ್ ಬಳಿಕ ದೇಶದ ಆರ್ಥಿಕತೆ ಸುಧಾರಿಸುತ್ತಿದೆ. ಕೃಷಿ ಚಟುವಟಿಕೆಗಳು ಆರಂಭವಾಗಿದ್ದು, ದ್ವಿಚಕ್ರ ವಾಹನಗಳ ಮಾರಾಟ ಹೆಚ್ಚಾಗಿದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳು ಸರ್ಕಾರದ ವಿಶೇಷ ಪ್ಯಾಕೇಜ್ ಗಳಿಂದ ಚೇತರಿಕೆ ಕಾಣುತ್ತಿದೆ ಎಂದರು.
click and follow Indiaherald WhatsApp channel