ಕ್ರೈಸ್ಟ್ ಚರ್ಚ್: ಭಾರತ ಕ್ರಿಕೆಟ್ ತಂಡದ ನಾಯಕ ಚೇಸಿಂಗ್ ಕಿಂಗ್ ವಿರಾಟ್ ಕೊಹ್ಲಿ ವಿಶ್ವದ ಅಗ್ರ ಬ್ಯಾಟ್ಸ್‌ ಮನ್. ಆದರೆ ಪ್ರಸ್ತುತ ನಡೆಯುತ್ತಿರುವ ಕಿವೀಸ್ ಪ್ರವಾಸದಲ್ಲಿ ಮಾತ್ರ ಪ್ಲಾಪ್ ಶೋ ಫರ್ಫಾಮೆನ್ಸ್ ನೀಡಿದ್ದಾರೆ. 
 
ನ್ಯೂಜಿಲೆಂಡ್ ಬೌಲರ್‌ ಗಳ ಪಾಲಿಗೆ ವಿರಾಟ್ ಕೊಹ್ಲಿ ಅವರನ್ನು ಕಟ್ಟಿ ಹಾಕುವುದು ಅಷ್ಟು ಸುಲಭವಾಗಿರಲಿಲ್ಲ. ಇದಕ್ಕಾಗಿ ಒಂದು ತಂಡವಾಗಿ ವ್ಯವಸ್ಥಿತ ಯೋಜನೆಯನ್ನು ರೂಪಿಸಿತ್ತು. ಈ ಬಗ್ಗೆ ಎಡಗೈ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ವಿವರಣೆ ನೀಡಿದ್ದಾರೆ. 
ಸರಣಿಯುದ್ಧಕ್ಕೂ ವಿರಾಟ್ ಕೊಹ್ಲಿ ಬ್ಯಾಟ್ ಸದ್ದು ಮಾಡದಂತೆ ನೋಡಿಕೊಳ್ಳಲಾಗಿದೆ. ಇದರ ಹಿಂದಿನ ರಹಸ್ಯವನ್ನು ಕೇಳಿದಾಗ ಹಾಗೇನಿಲ್ಲ, "ಯಾವುದೇ ಸಿಕ್ರೇಟ್‌ ಗಳಿಲ್ಲ. ವಿರಾಟ್ ಕೊಹ್ಲಿ ವಿಶ್ವದರ್ಜೆಯ ಬ್ಯಾಟ್ಸ್‌ ಮನ್.
 
ನಿಸ್ಸಂಶವಾಗಿಯೂ ಮಹಾನ್ ಆಟಗಾರ. ಆದರೆ ಅವರ ಮೇಲೆ ನಿರಂತರ ಒತ್ತಡವನ್ನು ಹೇರಲು ಸಾಧ್ಯವಾಯಿತು. ಬೌಂಡರಿ ಬೌಲ್‌ ಗಳನ್ನು ಕಡಿಮೆ ಎಸೆದು ಸಾಧ್ಯವಾದಷ್ಟು ಶಾಂತವಾಗಿರಿಸಲು ಬಯಸಿದ್ದೆವು. ಮಾಡಲು ಪ್ರಯತ್ನಿಸಿದ್ದೆವು. ಭಾರತದ ಕಪ್ತಾನ ಕೆಲವೊಂದು ತಪ್ಪುಗಳನ್ನು ಮಾಡಿರುವುದನ್ನು ಬೇಗನೇ ಕಟ್ಟಿ ಹಾಕಲು ನೆರವಾಯಿತು. ಈ ಬಗ್ಗೆ ಸಂತಸವಿದೆ" ಎಂದು ತಿಳಿಸಿದ್ದಾರೆ. 
 
"ವಿರಾಟ್ ಕೊಹ್ಲಿ ಎರಡೂ ಇನ್ನಿಂಗ್ಸ್‌ ಗಳಲ್ಲಿ ಸಮಾನವಾದ ರೀತಿಯಲ್ಲಿ ಎಲ್‌.ಬಿ.ಡಬ್ಲ್ಯು ಬಲೆಗೆ ಬಿದ್ದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಬೌಲ್ಟ್, "ಚೆಂಡಿನ ನೈಸರ್ಗಿಕ ಬದಲಾವಣೆಗಳನ್ನು ಬಳಕೆ ಮಾಡಲಾಯಿತು. ನೇರವಾಗಿ ಎಸೆದ ಚೆಂಡು ನೈಸರ್ಗಿಕ ವೆರಿಯೇಷನ್ ಪಡೆದುಕೊಂಡು ತಿರುವು ಪಡೆಯಿತು. ಏನೇ ಆದರೂ ಬೌಲಿಂಗ್ ವಿಭಾಗವು ಸಾಂಘಿಕ ಪ್ರಯತ್ನದೊಂದಿಗೆ ವಿರಾಟ್‌ ಕೊಹ್ಲಿಯನ್ನು ಕಟ್ಟಿ ಹಾಕಲು ಯಶಸ್ವಿಯಾಗಿದ್ದೇವೆ. ವಿರಾಟ್‌ ಗೆ ಕೆಟ್ಟ ಎಸೆತವನ್ನು ಮಾಡದಂತೆ ಎಚ್ಚರಿಕೆ ವಹಿಸಿದೆವು. ಅಂತಿಮವಾಗಿ ಬೇಗನೇ ಔಟ್ ಮಾಡಲು ಸಾಧ್ಯವಾಯಿತು" ಎಂದಿದ್ದಾರೆ ಬೌಲ್ಟ್. 
 
ಎರಡನೇ ದಿನದಾಟದಲ್ಲಿ ಒಟ್ಟು 16 ವಿಕೆಟ್‌ ಗಳು ಪತನಗೊಂಡಿದ್ದವು. ಈ ಪೈಕಿ ಭಾರತ ದ್ವಿತೀಯ ಇನ್ನಿಂಗ್ಸ್‌ ನಲ್ಲಿ 90 ರನ್ನಿಗೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಕಿವೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿಗೆ 38 (2, 19, 3, 14) ರನ್ ಗಳಿಸಲು ಮಾತ್ರ ಸಾಧ್ಯವಾಗಿತ್ತು.

మరింత సమాచారం తెలుసుకోండి: