ಬಹಳ ದಿನಗಳಿಂದ ಅಭಿಮಾನಿಗಳು ನಿರೀಕ್ಷಿಸುತ್ತಿದ್ದ ಅಂದ ಚೆಂದದ ಅರ್ಧಶತಕವನ್ನು ವಿರಾಟ್ ಕೊಹ್ಲಿ ಶನಿವಾರ ದಾಖಲಿಸಿದರು. ಕರ್ನಾಟಕದ ಹುಡುಗ ದೇವದತ್ತ ಪಡಿಕ್ಕಲ್ ಟೂರ್ನಿಯಲ್ಲಿ ಮೂರನೇ ಅರ್ಧಶತಕ ದಾಖಲಿಸಿದರು. ಇವರಿಬ್ಬರ ಅಬ್ಬರದ ಮುಂದೆ ರಾಜಸ್ಥಾನ ರಾಯಲ್ಸ್ ಆಟ ನಡೆಯಲಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಶನಿವಾರ 8 ವಿಕೆಟ್ ಗಳಿಂದ ಜಯಭೇರಿ ಬಾರಿಸಿತು. ಈ ಗೆಲುವಿನೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿತು.
155 ರನ್‌ಗಳ ಗುರಿ ಬೆನ್ನತ್ತಿದ ಬೆಂಗಳೂರು ತಂಡದ ಆಯರನ್ ಫಿಂಚ್ (8) ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಗೂಡಿದ ವಿರಾಟ್ ಹಾಗೂ ದೇವದತ್ತ ಎರಡನೇ ವಿಕೆಟ್ ಜೊತೆಯಾಟದಲ್ಲಿ 99 ರನ್ ಸೇರಿಸಿದರು. 53 ಎಸೆತಗಳನ್ನು ಎದುರಿಸಿದ ಕೊಹ್ಲಿ (ಔಟಾಗದೆ 72) ಇನಿಂಗ್ಸ್‌ನಲ್ಲಿ ಏಳು ಬೌಂಡರಿ ಎರಡು ಸಿಕ್ಸರ್ ಇದ್ದವು. ಪಡಿಕ್ಕಲ್ (63, 45 ಎಸೆತ, 6 ಬೌಂಡರಿ, 1 ಸಿಕ್ಸರ್) ಮತ್ತೊಂದು ಸುಂದರ ಇನಿಂಗ್ಸ್ ಕಟ್ಟಿದರು. ಪಡಿಕ್ಕಲ್ ಅವರು 16ನೇ ಓವರ್‌ನಲ್ಲಿ ಜೋಫ್ರಾ ಆರ್ಚರ್ ಅವರಿಗೆ ವಿಕೆಟ್ ಒಪ್ಪಿಸಿದಾಗ ತಂಡದ ಗೆಲುವಿಗೆ ಇನ್ನೂ 31 ರನ್‌ಗಳ ಅಗತ್ಯವಿತ್ತು. ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್ (ಔಟಾಗದೆ 12) ಗೆಲುವಿನ ಔಪಚಾರಿಕತೆ ಪೂರ್ಣಗೊಳಿಸಿದರು.
ಟಾಸ್ ಗೆದ್ದ ರಾಜಸ್ಥಾನ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಸ್ಪಿನ್ನರ್ ಯಜುವೇಂದ್ರ ಚಾಹಲ್ (24ಕ್ಕೆ 3) ಬೌಲಿಂಗ್ ದಾಳಿಗೆ ತತ್ತರಿಸಿತು. ಚಾಹಲ್ ಅವರು ಈ ಬಾರಿಯ ಐಪಿಎಲ್‌ನಲ್ಲಿ ಹೆಚ್ಚು ವಿಕೆಟ್ ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದರು. ರಾಜಸ್ಥಾನ ಇನಿಂಗ್ಸ್‌ನ ಮೂರನೇ ಓವರ್ ಎಸೆದ ಬೆಂಗಳೂರು ತಂಡದ ಬೌಲರ್ ಇಸುರು ಉಡಾನ ಅವರು ಎದುರಾಳಿ ತಂಡದ ನಾಯಕ ಸ್ಟೀವ್ ಸ್ಮಿತ್ (5) ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಜೋಸ್ ಬಟ್ಲರ್ (22) ದೊಡ್ಡ ಮೊತ್ತ ಗಳಿಸುವಲ್ಲಿ ಮತ್ತೊಮ್ಮೆ ವಿಫಲರಾದರು. ನವದೀಪ್ ಸೈನಿ, ಜೋಸ್ ಅವರ ವಿಕೆಟ್ ಕಬಳಿಸಿದರು. ಮೊದಲ ಎರಡು ಪಂದ್ಯಗಳಲ್ಲಿ ಭರ್ಜರಿ ಆಟವಾಡಿದ್ದ ಸಂಜು ಸ್ಯಾಮ್ಸನ್ (4) ಅವರು ಯಜುವೇಂದ್ರ ಚಾಹಲ್ ಅವರಿಗೆ ಮೊದಲ ವಿಕೆಟ್ ಆಗಿ ನಿರ್ಗಮಿಸಿದರು.
31ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಮಹಿಪಾಲ್ ಲೊಮ್ರೊರ್ (47, 39 ಎಸೆತ, 3 ಬೌಂಡರಿ, 1 ಸಿಕ್ಸರ್) ಹಾಗೂ ರಾಬಿನ್ ಉತ್ತಪ್ಪ (17, 22 ಎಸೆತ, 1 ಬೌಂಡರಿ) ಅಲ್ಪ ಆಸರೆಯಾದರು. ನಾಲ್ಕನೇ ವಿಕೆಟ್‌ಗೆ 39 ರನ್ ಸೇರಿಸಿದರು. ಉತ್ತಪ್ಪ ಹಾಗೂ ಲೊಮ್ರೊರ್ ಇಬ್ಬರೂ ಚಾಹಲ್‌ಗೆ ವಿಕೆಟ್ ಒಪ್ಪಿಸಿದರು. ರಿಯಾನ್ ಪರಾಗ್ (16) ಒಂದಷ್ಟು ಪ್ರತಿರೋಧ ತೋರಿದರು. ಆಲ್‌ರೌಂಡರ್ ರಾಹುಲ್ ತೆವಾಟಿಯಾ (ಔಟಾಗದೆ 24, 12 ಎಸೆತ, 3 ಸಿಕ್ಸರ್) ಹಾಗೂ ಜೋಫ್ರಾ ಆರ್ಚರ್ (16, 10 ಎಸೆತ, 1 ಬೌಂಡರಿ, 1 ಸಿಕ್ಸರ್) ತಂಡದ ಮೊತ್ತವನ್ನು 150ರ ಗಡಿ ದಾಟಿಸಲು ನೆರವಾದರು.
click and follow Indiaherald WhatsApp channel