ಕೊರೋನಾ ವೈರಸ್ ದೇಶದಲ್ಲಿ ಪ್ರತಿನಿತ್ಯವೂ ಕೂಡ ಗಣನೀಯವಾಗಿ ಹೆಚ್ಚಾಗುತ್ತಿದೆ, ಇದನ್ನು ತಡೆಯುವ ಉದ್ದೇಶದಿಂದ  ಕೊರೋನಾ ಸೋಂಕಿಗೆ ಔಷಧಿಯನ್ನು ಕಂಡುಹಿಡಿಯುವ ಪ್ರಯತ್ನದಲ್ಲಿ ಎಲ್ಲಾ ದೇಶಗಳೂ ತೊಡಗಿಕೊಂಡಿವೆ ಅದೇ ರೀತಿ ಭಾರತದಲ್ಲಿಯೂ ಕೂಡ ಕೊರೋನಾ ಸೋಂಕನ್ನು ತಡೆಗೆ ಔಷಧಿಯನ್ನು ಸಂಶೋಧಿಸಲಾಗಿತ್ತು. ಈ ಔಷಧಿ ಆಗಷ್ಟ 15ಕ್ಕೆ ಬಿಡುಗಡೆಯಾಗುತ್ತದೆ ಎಂದು ಹೇಳಲಾಗುತ್ತಿತ್ತು ಇದರಿಂದ ಅದೆಷ್ಟೋ ಜನರು ದೇಶ ಮೊದಲ ಸ್ಥಿತಿಗೆ ಬರುತ್ತದೆ ಎಂದು ನಂಬಿಕೆಯನ್ನು ಇಟ್ಟುಕೊಂಡಿದ್ದರು ಆದರೆ ಈಗ ಆ ನಂಬಿಕೆ ಕೊಚ್ಚಿಹೋದಂತಾಗಿದೆ.

ಹೌದು ಈ ವರ್ಷದೊಳಗೆ ಕೊರೋನಾ ವೈರಸ್ ವಿರುದ್ಧ ಭಾರತದಲ್ಲಿ ಲಸಿಕೆ ತಯಾರುವುದು ಅಸಾಧ್ಯ ಎಂದು ಅಧಿಕಾರಿಗಳು ಹೇಳಿದ್ದಾರೆನ್ನಲಾಗಿದೆ. ಜೈರಾಮ್ ರಮೇಶ್ ನೇತೃತ್ವದ ಸಂಸದೀಯ ಸಮಿತಿಯೊಂದರ ಮುಂದೆ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆಂದು ಮೂಲಗಳಿಂದ ನ್ಯೂಸ್18ಗೆ ತಿಳಿದುಬಂದಿದೆ. ಇತ್ತೀಚೆಗಷ್ಟೇ ಐಸಿಎಂಆರ್ ಮಹಾನಿರ್ದೇಶಕರು ಆಗಸ್ಟ್ 15ರೊಳಗೆ ಲಸಿಕೆ ತಯಾರಾಗುವಂತೆ ವಿವಿಧ ವೈದ್ಯಕೀಯ ಸಂಸ್ಥೆಗಳಿಗೆ ಡೆಡ್​ಲೈನ್ ಹಾಕಿದ ಸುದ್ದಿ ಬಂದಿತ್ತು. ಆದರೆ, ಆಗಸ್ಟ್ 15 ಇರಲಿ, ಈ ವರ್ಷಾಂತ್ಯದಷ್ಟರಲ್ಲೂ ಲಸಿಕೆ ಸಿದ್ಧಗೊಳ್ಳುವುದು ಅನುಮಾನ ಎಂಬುದು ಬಹುತೇಕ ಸ್ಪಷ್ಟವಾದಂತಾಗಿದೆ.

ವಿಜ್ಞಾನ-ತಂತ್ರಜ್ಞಾನ, ಪರಿಸರ ಮತ್ತು ಹವಾಮಾನ ಬದಲಾವಣೆಯ ಸಂಸದೀಯ ಸ್ಥಾಯಿ ಸಮಿತಿ ಇವತ್ತು ಸೇರಿದ ಸಭೆಯಲ್ಲಿ ಈ ವಿಚಾರ ಚರ್ಚೆಯಾಗಿದೆ. ಮಾರ್ಚ್ ತಿಂಗಳಲ್ಲಿ ಲಾಕ್ ಡೌನ್ ಘೋಷಣೆಯಾದ ನಂತರ ಮೊದಲ ಬಾರಿಗೆ ಈ ಸ್ಥಾಯಿ ಸಮಿತಿ ಸದಸ್ಯರು ಸಭೆ ಚರ್ಚೆ ಮಾಡಿದ್ದಾರೆ. ಈ ವೇಳೆ, ವಿಜ್ಞಾನ-ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರೆನ್ನಲಾಗಿದೆ. ಕೊರೋನಾ ವೈರಸ್ ರೋಗದ ವಿರುದ್ಧ ವಿಶ್ವಾದ್ಯಂತ ಹಲವು ರಾಷ್ಟ್ರಗಳಲ್ಲಿ ಲಸಿಕೆ ತಯಾರಿಸಲು ಪ್ರಯತ್ನ ಮಾಡುತ್ತಿವೆ. ಭಾರತದಲ್ಲೂ ಲಸಿಕೆ ಅಭಿವೃದ್ಧಿಪಡಿಸಲಾಗುತ್ತಿದೆ. ಸದ್ಯ ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ (ಡಿಸಿಜಿಐ) ಎರಡು ಲಸಿಕೆಗಳನ್ನ ಮಾನವನ ಮೇಲೆ ಪ್ರಯೋಗಿಸಲು ಅನುಮತಿ ನೀಡಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಹಯೋಗದಲ್ಲಿ ಭಾರತ್ ಬಯೋಟೆಕ್ ಸಂಸ್ಥೆ ಕೊವ್ಯಾಕ್ಸಿನ್ ಎಂಬ ಲಸಿಕೆ ತಯಾರಿಸುತ್ತಿದೆ. ಝೈಡಸ್ ಕ್ಯಾಡಿಲಾ ಹೆಲ್ತ್​ಕೇರ್ ಸಂಸ್ಥೆ ಮತ್ತೊಂದು ಲಸಿಕೆಯನ್ನ ಸಿದ್ಧಗೊಳಿಸುತ್ತಿದೆ. ಎರಡೂ ಕೂಡ ಆರಂಭಿಕ ಹಂತಗಳನ್ನ ದಾಟಿ ಈಗ ಮಾನವನ ಕ್ಲಿನಿಕಲ್ ಟ್ರಯಲ್​ಗೆ ಸಿದ್ಧವಾಗಿವೆ.

ಈ ವೇಳೆ, ಐಸಿಎಂಆರ್ ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ ಅವರು ಮಾನವರ ಮೇಲಿನ ಪ್ರಯೋಗದ ಪ್ರಕ್ರಿಯೆಯ ವೇಗ ಹೆಚ್ಚಿಸಬೇಕೆಂದು, ಆಗಸ್ಟ್ 15ರೊಳಗೆ ಪೂರ್ಣಗೊಳಿಸಬೇಕೆಂದು ಯೋಜನೆಯಲ್ಲಿ ನಿರತವಾಗಿರುವ ವೈದ್ಯಕೀಯ ಸಂಸ್ಥೆಗಳ ಸಂಶೋಧನಾಕಾರರಿಗೆ ಸೂಚಿಸಿದ್ದರು. ಆದರೆ, ಲಸಿಕೆ ತಯಾರಿಕೆಯನ್ನು ಇಷ್ಟು ಆತುರವಾಗಿ ಮಾಡುವುದು ತರವಲ್ಲ. ಅದರ ವಿಧಿವಿಧಾನಗಳನ್ನ ಸರಿಯಾಗಿ ಮಾಡಲೇಬೇಕು. ಇಲ್ಲದಿದ್ದರೆ ಮುಂದೆ ಅನಾಹುತಗಳಿಗೆ ಕಾರಣವಾಗಬಹುದು ಎಂದು ಅನೇಕ ತಜ್ಞರು ಎಚ್ಚರಿಸಿದ್ದಾರೆ.

ಸಾಕಷ್ಟು ಟೀಕೆ ಟಿಪ್ಪಣಿ ಬಂದ ಬಳಿ ಐಸಿಎಂಆರ್ ತನ್ನ ಪತ್ರಕ್ಕೆ ಸ್ಪಷ್ಟೀಕರಣ ನೀಡಿದೆ. ಲಸಿಕೆ ತಯಾರಕೆಯ ಅತ್ಯಗತ್ಯ ಪ್ರಕ್ರಿಯೆಗಳಿಗೆ ಧಕ್ಕೆಯಾಗದೇ ವ್ಯವಸ್ಥೆಯ ಅನಗತ್ಯ ವಿಳಂಬವನ್ನ ದೂರ ಮಾಡುವ ಉದ್ದೇಶದಿಂದಷ್ಟೇ ಈ ನಿರ್ದೇಶನ ನೀಡಲಾಗಿತ್ತು ಎಂದು ಐಸಿಎಂಆರ್ ಹೇಳಿದೆ.

ವಿಜ್ಞಾನಿಗಳ ಪ್ರಕಾರ, ಸರಿಯಾದ ರೀತಿಯ ಲಸಿಕೆ ತಯಾರಿಕೆಗೆ 10 ವರ್ಷಗಳಾದರೂ ಬೇಕು. ಆತುರವಾಗಿ ಸಿದ್ಧಪಡಿಸುತ್ತೇನೆಂದರೂ ಕನಿಷ್ಠ ಒಂದೂವರೆ ವರ್ಷವಾದರೂ ಅಗತ್ಯ ಇದೆ ಎನ್ನುತ್ತಾರೆ ತಜ್ಞರು. ಈ ಹಿನ್ನೆಲೆಯಲ್ಲಿ ಐಸಿಎಂಆರ್ ಸಂಸ್ಥೆ ಆಗಸ್ಟ್ 15ಕ್ಕೆ ಡೆಡ್​ಲೈನ್ ನಿಗದಿಪಡಿಸಿದಾಗ ಬಹಳಷ್ಟು ಜನರು ಗಾಬರಿಗೊಂಡಿದ್ದರು. ಹಿಂದೆ ಇದೇ ರೀತಿ ಆತುರಾತುರವಾಗಿ ತಯಾರಿಸಿದ ಲಸಿಕೆಯಿಂದ ಬಹಳಷ್ಟು ಅನಾಹುತವಾದ ಉದಾಹರಣೆಳುಂಟು. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕೂಡ ಎಚ್ಚರಿಕೆ ವಹಿಸುತ್ತಿದೆ.

మరింత సమాచారం తెలుసుకోండి: