ಕೊರೋನಾ ವೈರಸ್ ಇಂದಾಗಿ ಸಾಕಷ್ಟು ಸರ್ಕಾರಿ ಸೇವೆಗಳು ಸ್ಥಗಿತಗೊಂಡಿದ್ದವು ಇದರಿಂದ ಜನ ಸಾಮಾನ್ಯರು  ಸರ್ಕಾರಿ ಸೇವೆಗಳಿಂದ ವಂಚಿತರಾಗಿದ್ದರು ಆದರೆ ಇನ್ನು ಮುಂದೆ ಜನ ಸೇವಕ ಯೋಜನೆಗಳನ್ನು  ಕೆಲವು ಭಾಗಗಳಲ್ಲಿ ಆರಂಭಿಸಲಾಗುವುದು  ಎಂದು ಸಚಿವ ಸುರೇಶ್ ಕುಮಾರ್ ಹೇಲೀದ್ದಾರೆ. ಅಷ್ಟಕ್ಕೂ ಯಾವ ಯಾವ ಭಾಗದಲ್ಲಿ ಈ ಸೇವೆಯನ್ನು ಒದಗಿಸಿದ್ದಾರೆ ಗೊತ್ತಾ..?  

 

ಹೌದು ಆಧಾರ್ ನೊಂದಣಿ, ಎಪಿಎಲ್ ಪಡಿತರ ಚೀಟಿ ಮತ್ತು ಮತದಾರ ಹೆಸರು, ನೊಂದಣಿ ಸೇವೆಗಳನ್ನು ಸಕಾಲ ಸ್ಕೀಂನ ಜನಸೇವಕ ಯೋಜನೆಯಡಿ ಒದಗಿಸಲು ಸಂಬಂಧಿಸಿದ ಇಲಾಖೆಗಳು ಸಹಮತ ವ್ಯಕ್ತಪಡಿಸಿದ್ದು, ಇಷ್ಟರಲ್ಲಿಯೇ ಈ ಸೇವೆಗಳನ್ನು ಜನಸೇವಕ ವ್ಯಾಪ್ತಿಗೆ ತರಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಮಿಷನ್ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

 

ಕೋವಿಡ್ ಹಿನ್ನೆಲೆಯಲ್ಲಿ ತಾತ್ಕಾಲಿಕ ಸ್ಥಗಿತವಾಗಿದ್ದ ನಾಗರೀಕರ ಮನೆ ಬಾಗಿಲಿಗೆ ಸರ್ಕಾರಿ ಸೇವೆಗಳನ್ನು ಒದಗಿಸುವ ಜನಸೇವಕ ಯೋಜನೆಯನ್ನು ಪುನರಾರಂಭಗೊಳಿಸುವ ನಿಟ್ಟಿನಲ್ಲಿ ವಿಧಾನಸೌಧದದಲ್ಲಿ ಸೋಮವಾರ ನಡೆದ ಅಧಿಕಾರಿಗಳ ಹಾಗೂ ಬೆಂಗಳೂರಿನ ಸಂಬಂಧಿಸಿದ ವಿಧಾನಸಭಾ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ಈ ಯೋಜನೆಯನ್ನು ಶೀಘ್ರದಲ್ಲೇ ಪುನರಾರಂಭಿಸಲಾಗುವುದು ಎಂದರು.

 

ಪ್ರಸ್ತುತ ಜನಸೇವಕ ಯೋಜನೆ ಬೆಂಗಳೂರು ಮಹಾನಗರದ ರಾಜಾಜಿನಗರ, ಬೊಮ್ಮನಹಳ್ಳಿ, ಮಹದೇವಪುರ ಮತ್ತು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜಾರಿಯಲ್ಲಿದ್ದು, ಆದಾಯ, ಜಾತಿ ಪ್ರಮಾಣ ಪತ್ರ, ಹಿರಿಯ ನಾಗರೀಕರ ಪಿಂಚಣಿ ಸೇವೆ, ಕಾರ್ಮಿಕ, ಆರೋಗ್ಯ, ಪೊಲೀಸ್ ಸೇವೆಗಳು ಸೇರಿದಂತೆ 50 ಸೇವೆಗಳನ್ನು ಒದಗಿಸಲಾಗುತಿತ್ತು. ಇನ್ನು ಮುಂದೆ ಈ ವ್ಯಾಪ್ತಿಗೆ ಸಾರ್ವಜನಿಕ ಹಿತದೃಷ್ಟಿಯಿಂದ ತೀರಾ ಅಗತ್ಯವಾಗಿರುವ ಆಧಾರ್ ನೊಂದಣಿ, ಎಪಿಎಲ್ ಪಡಿತರ ಚೀಟಿ ಮತ್ತು ಮತದಾರ ಯಾದಿಗೆ ಹೆಸರು ನೊಂದಣಿ ಸೇವೆಗಳನ್ನು ತರಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

 

ಆಧಾರ್ ಸಂಖ್ಯೆಯು ಇತ್ತೀಚಿಗೆ ಎಲ್ಲ ವ್ಯವಹಾರಕ್ಕೂ ತೀರಾ ಅಗತ್ಯವಾಗಿರುವುದರಿಂದ ಇಂತಹ ಸ್ಥಿತಿಯಲ್ಲಿ ಹಿರಿಯ ನಾಗರೀಕರು, ಅಸಹಾಯಕರು ಈ ಸೇವೆಗಳನ್ನು ಪಡೆದುಕೊಳ್ಳಲು ಪರದಾಡುವಂತಾಗಿದೆ. ಹಿರಿಯರು ಈ ರೀತಿಯ ಕಷ್ಟಪಡುತ್ತಿರುವುದನ್ನು ಗಣನೆಗೆ ತೆಗೆದುಕೊಂಡು ಆಧಾರ್ ನೊಂದಣಿ ಮತ್ತು ಆಧಾರ್ ಅಪ್ಡೇಟ್ ಮಾಡುವ ಸೇವೆಗಳನ್ನು ಸಹ ಜನಸೇವಕ ವ್ಯಾಪ್ತಿಗೆ ತರಲಾಗುತ್ತಿದೆ ಎಂದು ಅವರು ಹೇಳಿದರು.

 

ಪ್ರಸ್ತುತ ದಿನಮಾನಗಳಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ವಯೋ ವೃದ್ಧರು, ಅಸ್ವಸ್ಥ ವ್ಯಕ್ತಿಗಳು ಸುರಕ್ಷಿತವಾಗಿ ಮನೆಯಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಎಲ್ಲ ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಜನಸೇವಕ ಸಿಬ್ಬಂದಿ ನಾಗರೀಕರಲ್ಲಿ ಸುರಕ್ಷಿತ ಭಾವನೆಯನ್ನು ಮೂಡಿಸುವ ಸಲುವಾಗಿ ಜನಸೇವಕ ಸೇವೆಗಳನ್ನು ಪುನರಾರಂಭಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ತಕ್ಷಣದಿಂದಲೇ ಈ ಸೇವೆಗಳ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ ಯೋಜನೆ ರೂಪಿಸಿ ಈ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

 

 

మరింత సమాచారం తెలుసుకోండి: