ಮುಂಬೈ: ಧೂಮ್ ಎಂಬ ಹೆಸರು ಕೇಳಿದಾಕ್ಷಣ ಮೈಯಲ್ಲಾ ಒಂದು ರೀತಿಯ ರೋಮಾಂಚನ ಆಗುತ್ತೆ ಅಲ್ವಾ. ಏಕೆಂದರೆ ಆ ಹೆಸರಿನ ಚಿತ್ರದಲ್ಲಿರೋ ಖದರ್ ಅಂತಹದ್ದು. ಹೌದು, ಪ್ರಸಿದ್ಧ ಧೂಮ್​ ಸಿನಿಮಾದ ಮೂರು ಭಾಗಗಳು ಹಿಟ್​ ಲಿಸ್ಟ್​ ಸೇರಿದ್ದು ಇನ್ನೇನು ಕೆಲ ದಿನಗಳಲ್ಲೇ ಧೂಮ್​ 4 ಕೂಡ ಸೆಟ್ಟೇರುವ ಸಾಧ್ಯತೆಯಿದೆ. ಧೂಮ್​ 4 ಚಿತ್ರದಲ್ಲಿ ದೊಡ್ಡ ತಾರಾಗಣವೇ ಕಾಣಿಸಿಕೊಳ್ಳಲಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿದ್ದು, ನಟ ಅಕ್ಷಯ್​ ಕುಮಾರ್​ ವಿಲನ್​ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ ಎಂಬ ಮಾತುಗಳು ಕೇಳಿ ಬರುತ್ತಿವೆ. 
 
ಕಳೆದ ಧೂಮ್ ಚಿತ್ರಗಳಲ್ಲಿ ಜಾನ್​ ಅಬ್ರಾಹಿಮ್​, ಅಮಿರ್​ ಖಾನ್​ ಮತ್ತು ಹೃತಿಕ್​ ರೋಷನ್​ ವಿಲನ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧೂಮ್​ 4 ಚಿತ್ರ ಬರಲಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಯಾರಾಗಲಿದ್ದಾರೆ ಈ ಚಿತ್ರದ ವಿಲನ್​ ಎಂದು ಸಾಕಷ್ಟು ಕುತೂಹಲಗಳು ಹುಟ್ಟಿಕೊಂಡಿದ್ದವು. ಶಾರುಖ್​ ಖಾನ್​, ರಣವೀರ್​ ಸಿಂಗ್​, ರಣಬೀರ್​ ಕಪೂರ್​, ಅಕ್ಷಯ್​ ಕುಮಾರ್​ ಹೀಗೆ ಹಲವು ಸ್ಟಾರ್​ ನಟರುಗಳು ಹೆಸರು ವಿಲನ್​ ಪಾತ್ರಕ್ಕೆ ಕೇಳಿಬಂದಿತ್ತು. 2019ರ ಅಕ್ಟೋಬರ್​ನಲ್ಲಿ ಧೂಮ್​ 4ನಲ್ಲಿ ಅಕ್ಷಯ್​ ಕುಮಾರ್​ ವಿಲನ್​ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಮಾಧ್ಯಮಗಳಲ್ಲೂ ಕೇಳಿಬಂದಿತ್ತು.
 
ಆದರೆ ಚಿತ್ರದ ವಿತರಕ ತಂಡವಾದ ಯಶ್​ ರಾಜ್​ ಫಿಲಂ ಅದನ್ನು ಸುಳ್ಳು ಸುದ್ದಿ ಎಂದು ಹೇಳಿಕೆ ನೀಡಿತ್ತು. ಧೂಮ್​ ಗೆ ಕಿಲಾಡಿ ಚಿತ್ರದಂತೆ ಕಾಮಿಡಿ ಟಚ್​ ನೀಡಬೇಕೇ? ನಾವು ಇನ್ನೂ ಧೂಮ್​ 4 ಸ್ಕ್ರಿಪ್ಟ್​ ಬಗ್ಗೆಯಾಗಲೀ ಅಥವಾ ಸಿನಿಮಾದ ತಾರಾಗಣದ ಬಗ್ಗೆಯಾಗಲೀ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಯಶ್​ ಫಿಲಂಸ್​ ಹೇಳಿತ್ತು. ಅದಾದ 4 ತಿಂಗಳ ಬಳಿಕ ಇದೀಗ ಬಾಲಿವುಡ್​ನ ವಿಶ್ಲೇಷಕ ಅತುಲ್​ ಮೋಹನ್​ ಧೂಮ್​ 4ನಲ್ಲಿ ಅಕ್ಷಯ್​ ವಿಲನ್​ ಎನ್ನುವ ಮಾಹಿತಿಯನ್ನು ಹೊರ ಬಿಟ್ಟಿದ್ದಾರೆ.
 
ಅತುಲ್​ ಧೂಮ್​ 4 ಚಿತ್ರದ ಕುರಿತಾಗಿ ಟ್ವೀಟ್​ ಮಾಡಿದ್ದು, ಅಕ್ಷಯ್​ ಈ ಸಿನಿಮಾದ ವಿಲನ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಈ ವಿಚಾರ ಅಧಿಕೃತವಾಗಿ ಹೊರಬೀಳಬೇಕಾಗಿದೆಯಷ್ಟೇ ಎಂದು ಹೇಳಿರುವ ಅವರು ಇದು ತಮಗೆ ಅತ್ಯಂತ ವಿಶ್ವಾಸನೀಯ ಮೂಲದಿಂದ ತಿಳಿದುಬಂದಿರುವ ವಿಚಾರ ಎಂದು ಹೇಳಿಕೊಂಡಿದ್ದಾರೆ.
 

మరింత సమాచారం తెలుసుకోండి: