ಧನುಷ್ ನಾಯಕನಟ ನಾಗಿ ಅಭಿನಯಿಸಿರುವ ವೆಟ್ರಿಮಾರನ್ ನಿರ್ದೇಶಿಸಿರುವ ಚಿತ್ರ ಅಸುರನ್ ಇದೀಗ ಸೈಲೆಂಚಾಗಿಯೇ ಸದ್ದು ಮಾಡಲು ಶುರುಮಾಡಿದೆ. ತಮಿಳಿನ ಧನುಷ್ ಹಾಗೂ ಮಲೆಯಾಳಂನ ಮಂಜು ವಾರಿಯರ್ ಮುಖ್ಯ ತಾರಾಗಣದಲ್ಲಿರುವ ಈ ಸಿನೆಮಾ ಜಾತೀಯತೆಯ ಮನಸುಗಳು ಹಾಗೂ ಕ್ರೌರ್ಯಗಳ ಕೆಲವು ಮುಖಗಳನ್ನು ಅನಾವರಣಗೊಳಿಸುತ್ತದೆ.


ಕಥಾನಾಯಕನ ಕುಟುಂಬದ ಸುತ್ತಾ ಈ ಕಥೆಯನ್ನು ಹೆಣೆಯಲಾಗಿದೆ. ತಮಿಳಿನ ಪೂಮಣಿ ಬರೆದ ‘ವೆಕೈ’ ಎಂಬ ಕಾದಂಬರಿ ಆಧಾರಿತ ಚಿತ್ರವಿದು. ಧನುಷ್‌ರ ಅಭಿನಯ ಚೆನ್ನಾಗಿದೆ. ಎಲ್ಲ ಪಾತ್ರಧಾರಿಗಳು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ಫ್ಲಾಶ್ ಬ್ಯಾಕ್ ಬರುವವರೆಗೂ ಚಿತ್ರದಲ್ಲಿ ಬಿಗಿತನ ಕಾಣುವುದಿಲ್ಲ. ಆ ಸನ್ನಿವೇಶಗಳಿಗೆ ತಕ್ಕಂತಹ ಭಾವಗಳನ್ನು, ಗಾಢತೆಗಳನ್ನು ವೀಕ್ಷಕರಿಗೆ ಮೂಡಿಸುವಲ್ಲಿ ಯಶಸ್ಸು ಕಾಣುವುದಿಲ್ಲ. ನಂತರದ ಚಿತ್ರ ನಿರ್ದೇಶಕರ ಹಿಡಿತ, ಪಾತ್ರಧಾರಿಗಳ ಅಭಿನಯ ಗಾಢತೆಯನ್ನು, ಸನ್ನಿವೇಶಗಳನ್ನು ವೀಕ್ಷಕರಿಗೆ ಗಾಢವಾಗಿ ತಟ್ಟುವಂತೆ ಕಥೆಯನ್ನು ನಿರೂಪಿಸುತ್ತಾ ಹೋಗುತ್ತದೆ.


ಚಿತ್ರದ ಕಥೆಯಲ್ಲಿಯೇ ಜಾತೀಯತೆಯ ಕ್ರೌರ್ಯ ಹಾಗೂ ಶೋಷಣೆ ಆ ಊರಿನ ಸುತ್ತಮುತ್ತಲಿನ ಸಾಮಾಜಿಕ ಸಮಸ್ಯೆಯಾಗಿ ಕಾಣುತ್ತಿದ್ದರೂ ಚಿತ್ರದಲ್ಲಿ ಅದು ಕಥಾನಾಯಕನ ಕುಟುಂಬಕ್ಕೂ ಆ ಊರಿನ ಆಸ್ತಿವಂತ ಕುಟುಂಬಕ್ಕೂ ನಡುವಿರುವ ಸಮಸ್ಯೆಯೆಂದು ಒತ್ತಿಹೇಳಲು ಬಹಳ ಪ್ರಯಾಸ ಪಟ್ಟಿದ್ದಾರೆ ಎನ್ನುವಂತಿದೆ. ಹೊಡೆದಾಟದ ದೃಶ್ಯಗಳಿಗೆ ಕೊಟ್ಟಷ್ಟು ಗಮನವನ್ನು, ಕಥೆಯ ಬಗ್ಗೆ, ಅದರ ಸಾಮಾಜಿಕ ಆಯಾಮಗಳ ಬಗ್ಗೆ, ಸನ್ನಿವೇಶಗಳನ್ನು ಗಾಢವಾಗಿ ಕಟ್ಟಿಕೊಡುವ ಬಗ್ಗೆ ನಿರ್ದೇಶಕರು ನೀಡಿದಂತೆ ಕಾಣಿಸುವುದಿಲ್ಲ.


ಸಾಮಾನ್ಯವಾಗಿ ಎಲ್ಲಾ ಸಾಮಾಜಿಕ ಸಮಸ್ಯೆಗಳನ್ನೊಳಗೊಂಡಿರುವ ಚಿತ್ರಗಳಂತೆ ವ್ಯಕ್ತಿ ಕೇಂದ್ರೀಕರಣವೇ ಎದ್ದು ಕಾಣುವಂತಿದೆ. ಒಂದು ಸನ್ನಿವೇಶದಲ್ಲಿ ಅದೂ ಕೊನೆಯ ಹೊಡೆದಾಟದ ಸನ್ನಿವೇಶದಲ್ಲಿ ಎಲ್ಲಾ ಮುಗಿದ ಮೇಲೆ ಸಮೂಹ ನಾಯಕನೊಂದಿಗೆ ಬಂದು ಸೇರಿಕೊಳ್ಳುವ ರೀತಿ ತೋರಿಸಲಾಗಿದೆ. ಅದರಲ್ಲೂ ಸಕ್ರಿಯತೆ ಇಲ್ಲ. ಮೇಲ್ಜಾತಿ ಆಸ್ತಿವಂತ ಕುಟುಂಬ ಮಾತ್ರ ಸಮೂಹವನ್ನು ತೊಡಗಿಸಿಕೊಳ್ಳುವುದನ್ನು ಸಹಜವೆಂಬಂತೆ ತೋರಿಸಲಾಗಿದೆ. ಆತ ತನ್ನ ಕುಟುಂಬದ ಹಲವರನ್ನು ಕಳೆದುಕೊಂಡರೂ ಕೊನೆಯವರೆಗೂ ಏಕಾಂಗಿ ಹೋರಾಟದ ದುರಂತ ವ್ಯಕ್ತಿಯನ್ನಾಗಿ ತೋರಿಸಿ ವೀಕ್ಷಕರ ಸಂತಾಪ ಗಿಟ್ಟಿಸಿಕೊಳ್ಳುವುದಕ್ಕೆ ಸೀಮಿತ ಮಾಡಿಡಲಾಗಿದೆ. ಪಂಚಾಯ್ತಿ ಸನ್ನಿವೇಶಗಳೂ ಕೂಡ ಪೇಲವವಾಗಿ ತೋರಿಸಲಾಗಿದೆ. ವೈಭವೀಕರಣಕ್ಕೆ ಒತ್ತು ಹೆಚ್ಚಿದೆ.


మరింత సమాచారం తెలుసుకోండి: