ಬೆಂಗಳೂರು: ದೋಸ್ತಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಿಂದ ಬಿಜೆಪಿಗೆ ಬಂದು ಉಪಚುನಾವಣೆಯಲ್ಲಿ ಸೋತ ಇಬ್ಬರು ಅನರ್ಹ ಶಾಸಕರು ಇದೀಗ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಆಡಳಿತಾರೂಢ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ. ಅದರಲ್ಲೂ ಶುಕ್ರವಾರ ದೆಹಲಿಯಲ್ಲಿ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಒಪ್ಪಿದ್ದು, ಇದೀಗ ಎಂಟಿಬಿ ವಿಶ್ವನಾಥ್ ಗೆ ಸಚಿವ ಸ್ಥಾನ ಸಿಗುತ್ತಾ ಇಲ್ವಾ ಎಂಬುದು ಕುತೂಹಲ ಕೆರಳಿಸಿದೆ.
 
ಹುಣಸೂರಿನಲ್ಲಿ ಸೋತ ಎಚ್‌.ವಿಶ್ವನಾಥ್‌ ಮತ್ತು ಹೊಸಕೋಟೆಯಲ್ಲಿ ಸೋಲು ಅನುಭವಿಸಿದ ಎಂ.ಟಿ.ಬಿ.ನಾಗರಾಜ್‌ ಅವರು ಇದೀಗ ತಮ್ಮನ್ನು ಸಚಿವರನ್ನಾಗಿ ಮಾಡುವಂತೆ ಪಟ್ಟು ಹಿಡಿದಿರುವುದರಿಂದ ಯಡಿಯೂರಪ್ಪ ಅವರಿಗೆ ಸಂಕಷ್ಟ ಎದುರಾಗಿದೆ. ಹೀಗಾಗಿ, ಈ ಸಂಕಷ್ಟದಿಂದ ಪಾರು ಮಾಡುವಂತೆ ಯಡಿಯೂರಪ್ಪ ಅವರು ವರಿಷ್ಠರ ಸಲಹೆ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ. ಅದರಲ್ಲೂ ಮಾಸ್ಟರ್ ಪ್ಲಾನ್ ವೊಂದನ್ನು ಮಾಡಿಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ. 
 
ಸರ್ಕಾರ ರಚನೆಗೂ ಮುನ್ನ ಅನ್ಯ ಪಕ್ಷಗಳ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೊದಲು ನಡೆದಿರುವ ಮಾತುಕತೆ ಬಗ್ಗೆ ಯಾವುದೇ ಮಾಹಿತಿ ಅಧಿಕೃತವಾಗಿ ಹೊರಬಿದ್ದಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದವರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗುತ್ತದೆಯೊ ಅಥವಾ ಎಲ್ಲರಿಗೂ ಸಚಿವ ಸ್ಥಾನ ನೀಡಲಾಗುತ್ತದೆಯೊ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಇತ್ತೀಚೆಗೆ ಒಬ್ಬೊಬ್ಬರಾಗಿ ನೀಡುತ್ತಿರುವ ಹೇಳಿಕೆಗಳನ್ನು ಗಮನಿಸಿದರೆ ಎಲ್ಲರಿಗೂ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಲಾಗಿತ್ತು ಎಂಬುದು ವ್ಯಕ್ತವಾಗುತ್ತದೆ.
 
ಸುಪ್ರೀಂಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ತಕ್ಷಣಕ್ಕೆ ಸೋತವರಿಗೆ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ. ವಿಧಾನಮಂಡಲದ ಯಾವುದಾದರೊಂದು ಸದನದ ಸದಸ್ಯರಾದ ನಂತರವೇ ಅಧಿಕಾರಯುತ ಸ್ಥಾನ ನೀಡಬಹುದಾಗಿದೆ. ಸದ್ಯಕ್ಕೆ ಪರಿಷತ್‌ ಸ್ಥಾನಗಳೂ ತೆರವಾಗಿಲ್ಲ. ಬರುವ ಜೂನ್‌ ವರೆಗೆ ಕಾಯಲೇಬೇಕಾಗುತ್ತದೆ.
 
ಕಳೆದ ವಾರ ಯಡಿಯೂರಪ್ಪ ಅವರು ಸೋತವರಿಗೆ ಸಚಿವ ಸ್ಥಾನ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂಬ ಹೇಳಿಕೆ ನೀಡಿದ ನಂತರ ಈ ಗೊಂದಲ ಹೆಚ್ಚಾಗಿತ್ತು. ಶುಕ್ರವಾರ ಯಡಿಯೂರಪ್ಪ ಅವರ ಪಟ್ಟಿಗೆ ಹೈಕಮಾಂಡ್ ಒಪ್ಪಿದ್ದು, ಇದೀಗ ಎಂಟಿಬಿ, ವಿಶ್ವನಾಥ್ ಗೆ ಸಚಿವ ಸ್ಥಾನ ನೀಡಿ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರಾ ಇಲ್ಲವಾ ಎಂಬುದು ಕಾದುನೋಡಬೇಕಿದೆ.

మరింత సమాచారం తెలుసుకోండి: