ಬೆಂಗಳೂರು: ಪ್ರಸ್ತುತ ಎಲ್ಲೆಲ್ಲೂ ಸೋಜುಗದ ಸೂಜು ಮಲ್ಲಿಗೆ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದ್ದು ಪ್ರತಿಯೊಬ್ಬರ ಬಾಯಲ್ಲೂ ಅದೇ ಗುನುಗುತ್ತಿದೆ. ಹೌದು, ಈ ಹಾಡನ್ನು ಹಾಡಿರೋದು ಕೆಜಿಎಫ್ ಖ್ಯಾತಿಯ ಅನನ್ಯ ಭಟ್. 
 
ಏಕಾಂಗಿ ಅನಿಸಿದಾಗ ಏಕಾಂತವಾಗಿ ಸಂಗೀತ ಆಲಿಸಿದರೆ ಇಡೀ ಪ್ರಪಂಚವೇ ತಮ್ಮೊಂದಿಗಿದೆ ಎನ್ನೋ ಭಾವ. ಅಂತಹ ಸಂಗೀತಕ್ಕೆ ಈ ಭೂಮಿ ಮೇಲೆ ಮಾರುಹೋಗದವರೇ ಇಲ್ಲ. ಸದ್ಯ ಇತ್ತೀಚೆಗೆ ಶಿವರಾತ್ರಿ ಹಬ್ಬದ ದಿನ ಜಾಗರಣೆಯ ನಿಮಿತ್ತ ನಮ್ಮ ಕನ್ನಡದ ಕಂಠದಲ್ಲರಳಿದ ಜಾನಪದ ಹಾಡೊಂದು ಸದ್ಯ ಬಿರುಗಾಳಿಯಂತೆ ಕೇಳುಗರ ಕಿವಿಗಪ್ಪಳಿಸುತ್ತಿದೆ.
 
ಹೌದು.. ಇದು ಶಿವಶರಣರು ಮಾದೇವನ ಧ್ಯಾನದಲ್ಲಿ ಹಾಡುವ ಟಿಪಿಕಲ್ ಜಾನಪದ ಗೀತೆ. ಕೆಲ ಮಾಡ್ರನ್ ಹಾಡುಗಳ ಕರ್ಕಶ ಸದ್ದಿನಿಂದ ಸಂಗೀತದ ಮೇಲೆ ವಿರಕ್ತಿ ಹುಟ್ಟಿದಂತಹವರಿಗಾಗಿಯೇ ಮತ್ತೆ ಸ್ಟ್ರೀಮ್ ಲೈನ್ ​ಗೆ ಬಂದಿರುವ ಪಕ್ಕಾ ಜಾನಪದ ಸೊಬಗಿನ ಸೋಜುಗದ ಹಾಡಿದು. ಇದನ್ನ ಹಾಡಿರೋದು ಕೆಜಿಎಫ್ ಖ್ಯಾತಿಯ ಅನನ್ಯಾ ಭಟ್. ಈಕೆಯ ಕಂಠಕ್ಕೆ ಸದ್ಗುರುಗಳೇ ತಲೆದೂಗಿದ್ದು, ಸದ್ಯ ಎಲ್ಲೆಲ್ಲೂ ಈ ಹಾಡಿನದ್ದೇ ಮಾತುಗಳು. 
 
ಸೋಜುಗದ ಸೂಜು ಮಲ್ಲಿಗೆ, ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ. ಎನ್ನೋ ಅದ್ಭುತ ಸಾಲುಗಳಿರುವ ಈ ಹಾಡು ಅಗಾಧವಾದ ಅರ್ಥವನ್ನ ಅಡಗಿಸಿಟ್ಟಿದೆ. ಆ ಹಾಡಿಗೆ ಅಪರೂಪದ ಅನನ್ಯ ಕಂಠ ಮತ್ತೊಂದು ಗರಿಮೆ ತಂದುಕೊಟ್ಟಿದೆ ಅಂದ್ರೆ ತಪ್ಪಾಗಲ್ಲ. ಅಂದಹಾಗೆ ಇಷ್ಟಕ್ಕೂ ಈ ಅನನ್ಯಾ ಭಟ್ ಯಾರು..? ಈ ಹಿಂದೆ ಯಾವ್ಯಾವ ಹಾಡು ಹಾಡಿದ್ರು ಅನ್ನೋದು ಕೆಲವರಿಗೆ ಕುತೂಹಲ ತರಿಸಿರಲಿದೆ. ಲೂಸಿಯಾ ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಅನನ್ಯಾರನ್ನ ಕರೆತಂದಿದ್ದೇ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ. ‘ನೀ ತೊರೆದ ಗಳಿಗೆಯಲಿ’ ಎನ್ನೋ ಹಾಡಿನ ಮುಖೇನ ಲಕ್ಷಾಂತರ ಮ್ಯೂಸಿಕ್ ಪ್ರಿಯರ ದಿಲ್ ಗೆದ್ದ ಗರಿಮೆ ಅನನ್ಯಾರಿಗೆ ಸಲ್ಲಲಿದೆ. 
 
ಅದು ಆದ ಬಳಿಕ ಮತ್ತದೇ ತೇಜಸ್ವಿ ಅವರ ‘ಬಾರಿಸು ಕನ್ನಡ ಡಿಂಡಿಮವ’ ಎನ್ನೋ ಆಲ್ಬಮ್​ ಹಾಡಿನಲ್ಲೂ ನವೀನ್ ಸಜ್ಜು ಜೊತೆ ಕಂಠಗೂಡಿಸಿ ಸಕ್ಸಸ್ ಆದರು. ಇದೀಗ ಸೂಜು ಮಲ್ಲಿಗೆ ಯಿಂದ ಪ್ರತಿಯೊಬ್ಬರ ಮನೆ ಮಾತಾಗಿದ್ದಾರೆ.

మరింత సమాచారం తెలుసుకోండి: