ಹೈದ್ರಾಬಾದ ಕರ್ನಾಟಕವೆಂದು ಕರೆಸಿಕೊಳ್ಳುತ್ತಿದ್ದ ಕರ್ನಾಟಕದ ಕೆಲವು ಜಿಲ್ಲಗಳನ್ನು ಹೈದ್ರಾಬಾದ ಕರ್ನಾಟಕ ಎಂಬ ಹೆಸರಿಗೆ ಮುಕ್ತಿ ನೀಡಿ ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣವನ್ನು ಮಾಡಲಾಗಿದೆ. ಇದರ ಜೊತೆಗೆ ಕರ್ನಾಟಕ ಸರ್ಕಾರ ಕಲ್ಯಾಣ ಕರ್ನಾಟಕಕ್ಕೆ ಸೌಲಭ್ಯಗಳನ್ನು ನೀಡಿ ಆ ಭಾಗಗಳನ್ನು ಅಭಿವೃದ್ಧಯನ್ನು ಮಾಡುವ ಉದ್ದೇಶದಿಂದ ಸರ್ಕಾರ ಸಾಕಷ್ಟು ಹಣ ಬಿಡುಗಡೆಯನ್ನು ಮಾಡಿದೆ.  ಅಷ್ಟಕ್ಕೂ ಸರ್ಕಾರದಿಂದ ಈ ಭಾರಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ  ಎಷ್ಟು ಹಣ ಬಿಡುಗಡೆ ಮಾಡಿದೆ. ಗೊತ್ತಾ..?




ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಮತ್ತು ಸಾಂಸ್ಕೃತಿಕ ಸಂಘದ ಪ್ರಸಕ್ತ ವರ್ಷದ ಕ್ರಿಯಾ ಯೋಜನೆಗೆ ರಾಜ್ಯ ಸರಕಾರ ಒಪ್ಪಿಗೆ ನೀಡಿದೆ.  ಇದಕ್ಕಾಗಿ 300 ಕೋಟಿ ರೂಪಾಯಿ ಮಂಜೂರು ಮಾಡಿದ್ದಲ್ಲದೆ ತಕ್ಷಣವೇ 100 ಕೋಟಿ ರೂಪಾಯಿ ಬಿಡುಗಡೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೂಚಿಸಿದ್ದಾರೆ. ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ್ ಪಾಟೀಲ್ ಸೇಡಂ ಅವರೊಂದಿಗೆ ಬೆಂಗಳೂರಿನಲ್ಲಿಂದು ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಭೆ ನಡೆಸಿದ ಮುಖ್ಯಮಂತ್ರಿಯವರು ತಕ್ಷಣವೇ 100 ಕೋಟಿ ರೂಪಾಯಿ ಬಿಡುಗಡೆಗೆ ಈ ಸಭೆಯಲ್ಲಿ ಆದೇಶ ನೀಡಿದ್ದಾರೆ.





ಬಸವ ಕಲ್ಯಾಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅನುಭವ ಮಂಟಪದ ಹಳೆಯ ಯೋಜನೆ ಪರಿಸ್ಕರಿಸಿ ಹೊಸ ವರದಿ ನೀಡಲು ಸಿಎಂ ಸೂಚಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನಲ್ಲಿ ವಸತಿ ನಿಲಯ ನಿರ್ಮಾಣಕ್ಕೆ ಅರ್ಧ ಎಕರೆ ಜಮೀನು ಬದಲಿಗೆ ಪೀಣ್ಯದಲ್ಲಿ ಒಂದು ಎಕರೆ ಭೂಮಿ ನೀಡುವ ಪ್ರಸ್ತಾವನೆಯನ್ನು ಸ್ವೀಕರಿಸಿರುವ ಸಿಎಂ, ಇದಕ್ಕೆ ಒಪ್ಪಿಗೆ ಪಡೆಯುವ ಕಾರ್ಯ ಆರಂಭಕ್ಕೆ ಆದೇಶ ನೀಡಿದರು.






ಕಲ್ಯಾಣ ಕರ್ನಾಟಕ ಪ್ರದೇಶದ ಕಲಬುರಗಿ ಮತ್ತು ಬೀದರ್ ಜಿಲ್ಲೆಗೆ 34 ಟಿ.ಎಂ.ಸಿ. ನೀರು ಅಗತ್ಯವಿದೆ. ಆದ್ರೆ ಇದುವರೆಗೆ ಕೇವಲ 8-9 ಟಿ.ಎಂ.ಸಿ. ನೀರು ಮಾತ್ರ ಬಳಕೆಯಾಗುತ್ತಿದೆ. ಹೆಚ್ಚುವರಿ ನೀರು ಬಳಕೆಗಾಗಿ ಶಹಾಬಾದ್ ಸಮೀಪದ ಹೊನಗುಂಟದಿಂದ ಬೀದರ್ ವರೆಗೆ ಕುಡಿಯುವ ನೀರು ಪೂರೈಕೆಗೆ ಯೋಜನೆಯ ಬಗ್ಗೆ ಸೇಡಂ ಪ್ರಸ್ತಾಪಿಸಿದರು.






ಕಲಬುರಗಿ ನಗರದ ಚರಂಡಿ ನೀರು ಭೀಮ ನದಿಗೆ ಸೇರುವುದನ್ನು ತಡೆಯಲು 100 ಕೋಟಿ ರೂಪಾಯಿ ನೀಡಲು ಈಗಾಗಲೇ ಸಿಎಂ ಒಪ್ಪಿಗೆ ಸೂಚಿಸಿದ್ದು, ಇದನ್ನು 200 ಕೋಟಿ ರೂಪಾಯಿವರೆಗೆ ಆದರೂ ನೀಡಲು ಸಿಎಂ ಆದೇಶಿಸಿದರು. ಅಲ್ಲದೆ 25 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆಗೂ ಸಿಎಂ ತಾತ್ವಿಕ ಒಪ್ಪಿಗೆ ನೀಡಿದ್ದಾರೆ.




ಚಿತ್ತಾಪುರ, ಸೇಡಂ, ಚಿಂಚೋಳಿ ತಾಲೂಕಿನಲ್ಲಿ 10 ಏತ ನೀರಾವರಿ ಯೋಜನೆಗಳಿಗೆ ಸಿಎಂ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಇದರಿಂದ ಈ ತಾಲೂಕಿನ 40 ಹಳ್ಳಿಗಳ 65 ರಿಂದ 70 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ.




ರಾಯಚೂರು ಜಿಲ್ಲೆಯ ಗೊಳಪಲ್ಲಿ ವಿದ್ಯುತ್ ಯೋಜನೆ ನೆನೆಗುದಿಗೆ ಬಿದ್ದಿದ್ದು, 1200 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ 10 ಸಾವಿರ ಕೋಟಿ ರೂಪಾಯಿ ಯೋಜನೆಯ ಪ್ರಸ್ತಾವನೆ ಸ್ವೀಕರಿಸಿ ಪರಿಶೀಲನೆಗೆ ಸಿಎಂ ಒಪ್ಪಿಗೆ ನೀಡಿದರು. ಕಲಬುರಗಿಯ ಇ.ಎಸ್.ಐ. ಆಸ್ಪತ್ರೆಯನ್ನು ಏಮ್ಸ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಲು ಮತ್ತು ಕಲಬುರಗಿ ರೈಲ್ವೆ ವಿಭಾಗೀಯ ಕೇಂದ್ರ ಸ್ಥಾಪನೆಗೆ ಕೇಂದ್ರದ ಮೇಲೆ ಒತ್ತಡ ಹಾಕಲು ಸಭೆಯಲ್ಲಿ ತೀರ್ಮಾನಿಸಲಾಯಿತು.




ಸಭೆಯಲ್ಲಿ ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಹಣಕಾಸು ಇಲಾಖೆಯ ಪ್ರಧಾನ ಕಾಯದರ್ಶಿ ಐಎನ್ಎಸ್ ಪ್ರಸಾದ, ಮುಖ್ಯಮಂತ್ರಿಗಳ ರಾಜಕೀಯ ಕಾಯದರ್ಶಿ ಶಂಕರಗೌಡ, ಸಂಘದ ಕಾರ್ಯದರ್ಶಿ ಭೀಮಾಶಂಕರ ತೆಗ್ಗೆಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

మరింత సమాచారం తెలుసుకోండి: