ಬೆಂಗಳೂರು: ಟೈಟಲ್ ನಿಂದಲೇ ಭಾರೀ ಸದ್ದು ಮಾಡಿದ್ದ ಡಾಲಿ ಧನುಂಜಯ್ ಅಭಿನಯದ ಚಿತ್ರ 'ಪಾಪ್ ಕಾರ್ನ್ ಮಂಕಿ ಟೈಗರ್' ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಹೌದು, ಬಿಡುಗಡೆಗೂ ಮುನ್ನವೇ ಭಾರೀ ಕುತೂಹಲ ಹುಟ್ಟಿಸಿದ್ದ ಈ ಚಿತ್ರ ಇದೀಗ ಆ ಕುತೂಹಲ ಏನೆಂಬುದಕ್ಕೆ ಚಿತ್ರಮಂದಿರಗಳಲ್ಲಿ ಇಂದಿನಿಂದ ಉತ್ತರ ಸಿಗಲಿದೆ. 
 
ನನ್ನ ಕನಸಿನಲ್ಲಿಯೂ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾ ಸೀನ್​ಗಳೇ ಬರುತ್ತಿರುತ್ತವೆ. ಸೂರಿ ಅವರ ಸಿನಿಮಾದಲ್ಲಿ ನಟಿಸುವುದು ಎಂದರೆ ಒಂದು ಅಕಾಡೆಮಿಯಲ್ಲಿ ಕಲಿತ ಹಾಗೆ ಎಂದು ಹೇಳುತ್ತಾರೆ ಅಮೃತಾ ಅಯ್ಯಂಗಾರ್. ಇಂದು ಬಿಡುಗಡೆ ಆಗುತ್ತಿರುವ ‘ಪಾಪ್​ ಕಾರ್ನ್ ಮಂಕಿ ಟೈಗರ್’ ಚಿತ್ರದಲ್ಲಿ ನಾಯಕಿಯಾಗಿರುವ ಅಮೃತಾ ತಮ್ಮ ಪಾತ್ರದ ಬಗ್ಗೆ ಹೇಳಿದ್ದಾರೆ.
 
‘ಈ ಚಿತ್ರದಲ್ಲಿ ಸುಮಿತ್ರಾ ಎಂಬ ಮಧ್ಯಮವರ್ಗದ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಜೀವನದ ಬಗ್ಗೆ ಬಹಳ ಭಯ ಇರುವಂತಹವಳು. ಜತೆಗೆ ತುಂಬಾ ಎಮೋಷನಲ್ ಕೂಡ. ಹೌದು, ನಾನು ಎಷ್ಟೇ ಸಿನಿಮಾದಲ್ಲಿ ನಟಿಸಿದರೂ ಅದನ್ನು ಪಾಪ್ ​ಕಾರ್ನ್​ಗೆ ಮ್ಯಾಚ್ ಮಾಡಲು ಸಾಧ್ಯವಿಲ್ಲ. ಅಂಥ ಒಂದು ಅದ್ಭುತ ಅನುಭವವನ್ನು ಈ ಚಿತ್ರದಲ್ಲಿ ಪಡೆದುಕೊಂಡಿದ್ದೇನೆ’ ಎನ್ನುತ್ತಾರೆ ಅಮೃತಾ. ‘ಪ್ರತಿಯೊಂದು ಸೀನ್, ಪ್ರತಿ ಫ್ರೇಮ್ ಕೂಡ ಒಂದು ಹೊಸ ಅನುಭವ ನೀಡಿದೆ. ಸೂರಿ ಅವರ ನಿರ್ದೇಶನದಲ್ಲಿ ಕೆಲಸ ಮಾಡುವಾಗ ಪ್ರತಿ ದಿನ, ಪ್ರತಿ ಕ್ಷಣ ಹೊಸದನ್ನು ಕಲಿಯುತ್ತೇವೆ ಎಂದರು. 
 
ನಾನು ಬೇರೆ ಚಿತ್ರಗಳಲ್ಲಿ ನಟಿಸಿದ್ದಕ್ಕೂ ಇದರಲ್ಲಿ ನಟಿಸಿದ್ದಕ್ಕೂ ಬಹಳ ವ್ಯತ್ಯಾಸವಿದೆ. ಇನ್ನು ನಾನು ‘ಟಗರು’ ನೋಡಿದ ಮೇಲೆ ಧನಂಜಯ ಅವರಿಗೆ ಫ್ಯಾನ್ ಆಗಿದ್ದೆ. ಆ ಚಿತ್ರದಲ್ಲಿ ಅವರ ಕಣ್ಣನ್ನು ನೋಡಿ ಇವರನ್ನು ಹೇಗೆ ಫೇಸ್ ಮಾಡುವುದು ಎಂದುಕೊಂಡಿದ್ದೆ. ಆದರೆ ಅವರ ಜತೆ ನಟಿಸಲು ಆರಂಭಿಸಿದ ಮೇಲೆ ಆ ಅಭಿಪ್ರಾಯ ಬದಲಾಯಿತು’ ಎನ್ನುತ್ತಾರೆ ಅಮೃತಾ. ‘ಇಂದು ಚಿತ್ರ ರಿಲೀಸ್ ಆಗುತ್ತಿದೆ, ಜನ ಹೇಗೆ ರಿಸಿವ್ ಮಾಡುತ್ತಾರೋ ಎಂಬ ಭಯ ಇದೆ. ಈ ಎರಡು ದಿನವನ್ನು ನಾನು ಗಂಟೆಗಳ ಲೆಕ್ಕದಲ್ಲಿ ಕಳೆಯುತ್ತಿದ್ದೇನೆ. ಸಿನಿಮಾ ಖಂಡಿತ ಎಲ್ಲರಿಗೂ ಇಷ್ಟವಾಗುತ್ತದೆ’ ಎಂದಿದ್ದಾರೆ ನಟಿ ಅಮೃತ.
 

మరింత సమాచారం తెలుసుకోండి: