ಬೆಂಗಳೂರು: ಸ್ಯಾಂಡಲ್ ವುಡ್ ನ ಹೊಸ ಪ್ರಯತ್ನದ ಫಲವಾಗಿ ಬೊಂಬಾಟ್ ಕಥೆಯೊಂದು ಸಿದ್ದವಾಗುತ್ತಿದೆ. ಇಷ್ಟು ದಿನ ಸಂಗೀತ ನಿರ್ದೇಶಕರಾಗಿ, ಗೀತ ಸಾಹಿತಿಯಾಗಿ ಕೆಲಸ ಮಾಡಿದ್ದ ಮಂಜು ಕವಿ ಈಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ‘ಟೆಂಪರ್’ ಹೆಸರಿನ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಹಾಗಂತ ಇದು ತೆಲುಗಿನ ‘ಟೆಂಪರ್’ ಚಿತ್ರದ ರಿಮೇಕ್ ಅಲ್ಲ. ಬದಲಿಗೆ ಹಳ್ಳಿಯಲ್ಲಿ ನಡೆಯುವ ಗ್ರಾಮೀಣ ಸೊಗಡಿನ ಕಥೆಯನ್ನು ಚಿತ್ರದಲ್ಲಿ ಅಳವಡಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಮುಹೂರ್ತ ನೆರವೇರಿಸಿಕೊಂಡ ಚಿತ್ರತಂಡಕ್ಕೆ ನಿರ್ದೇಶಕ ನಂದಕಿಶೋರ್ ಚಾಲನೆ ನೀಡಿದರೆ, ನಟ ತಬಲ ನಾಣಿ ಕ್ಯಾಮರಾಕ್ಕೆ ಚಾಲನೆ ನೀಡಿದರು.
 
ಡಿಫರೆಂಟ್ ಟೈಟಲ್ ನೊಂದಿಗೆ ಚಿತ್ರ ಸೆಟ್ಟೇರುತ್ತಿದೆ. ತಕ್ಷಣಕ್ಕೆ ಕೋಪಿಸಿಕೊಳ್ಳುವ ನಾಯಕ ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾನೆ ಎಂಬುದನ್ನು ಸಿನಿಮಾದಲ್ಲಿ ತೋರಿಸಲಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಮಂಜು ಕವಿ. ನಾಯಕನ ತಂದೆಯಾಗಿ ತಬಲ ನಾಣಿ ಕಾಣಿಸಿಕೊಳ್ಳಲಿದ್ದು, ಅವರ ಪಾತ್ರವೂ ಅಷ್ಟೇ ವಿಶೇಷವಾಗಿದೆ. ನಟ ಆರ್ಯನ್ ಸೂರ್ಯಗೆ ಇದು ಮೊದಲ ಸಿನಿಮಾ. ‘ನಟನಾಗಿ ನನ್ನನ್ನು ನಾನು ತೆರೆದುಕೊಳ್ಳಲು ಒಳ್ಳೆಯ ಪಾತ್ರ ಸಿಕ್ಕಿದೆ.
 
ಸಿನಿಮಾ ನೋಡುಗರಿಗೆ ಬೇಕಾದ ಕಮರ್ಷಿಯಲ್ ಅಂಶಗಳು ಕಥೆಯಲ್ಲಿರುವುದರಿಂದ ಎಲ್ಲ ರೀತಿಯಲ್ಲೂ ಸಿದ್ಧನಾಗುತ್ತಿದ್ದೇನೆ’ ಎನ್ನುತ್ತಾರೆ. ಚಿತ್ರದಲ್ಲಿ ನಾಯಕಿಯಾಗಿ ಕಾಶಿಮಾ ನಟಿಸುತ್ತಿದ್ದಾರೆ. ‘ಮೆಡಿಕಲ್ ವಿದ್ಯಾರ್ಥಿನಿಯಾಗಿ, ತುಂಬ ಪ್ರಬುದ್ಧ ಹುಡುಗಿಯ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳಲಿದ್ದೇನೆ. ಆಕೆ ಎಲ್ಲ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳುತ್ತಾಳೆ. ಹೀಗಿರುವಾಗ ಗ್ಯಾರೇಜ್​ನಲ್ಲಿ ಕೆಲಸ ಮಾಡುವ ನಾಯಕನನ್ನು ಪ್ರೀತಿಸುತ್ತಾಳೆ. ಆ ಪ್ರೀತಿ ಅವಳಿಗೆ ಸಿಗುತ್ತಾ ಎಂಬುದು ಚಿತ್ರದ ಕಥೆಯಾಗಿದ್ದು ಹೇಗೆ ತೆರೆ ಮೇಲೆ ಮೂಡಿಬರಲಿದೆ ಎಂಬುದು ಇದೀಗ ಕುತೂಹಲ ಕೆರಳಿಸಿದೆ.
 
 ಬಲ ರಾಜವಾಡಿ, ಯತಿರಾಜ್, ದಿನೇಶ್ ಪಾತ್ರವರ್ಗದಲ್ಲಿದ್ದಾರೆ. ಡಾ. ಎಚ್.ಎಂ. ರಾಮಚಂದ್ರ ಹಾಗೂ ವಿನೋದ್ ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ನಾಲ್ಕು ಹಾಡುಗಳಿಗೆ ಆರ್. ಹರಿಬಾಬು ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಶೇಷ ಏನೆಂದರೆ ತಬಲಾ ನಾಣಿ ಸಂಭಾಷಣೆ ಈ ಚಿತ್ರಕ್ಕಿದೆ. ಆರ್.ಕೆ. ಶಿವಕುಮಾರ್ ಅವರದ್ದು ಛಾಯಾಗ್ರಹಣದ ಉಸ್ತುವಾರಿಯಾಗಿದ್ದು ಚಿತ್ರ ಅದ್ಧೂರಿಯಾಗಿ ತೆರೆ ಮೇಲೆ ಮೂಡಿಸಲು ಚಿತ್ರತಂಡ ಸಜ್ಜಾಗಿದೆ.

మరింత సమాచారం తెలుసుకోండి: