ಬೆಂಗಳೂರು: 15ಕ್ಷೇತ್ರಗಳಲ್ಲಿ ಅತೃಪ್ತ ಶಾಸಕರು ರಾಜೀನಾಮೆ ನೀಡಿ ಸಮ್ಮಿಶ್ರ ಸರ್ಕಾರ ಉರುಳಿಸಿದ್ದರು. ಇದೀಗ ಈ 15ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಸಲು ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ. ಆಶ್ಚರ್ಯ ಏನಪ್ಪಾ ಅಂದ್ರೆ 11ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷವು ಬಿಜೆಪಿ ಜೊತೆ ಸೇರಿ ದೋಸ್ತಿ ನಡೆಸಲು ಬಿಗ್ ಪ್ಲಾನೊಂದು ಹಾಕಿಕೊಂಡಿದೆಯಂತೆ. 


 ಒಂದೂವರೆ ವರ್ಷ  ಮೈತ್ರಿ ಸರ್ಕಾರ ನಡೆಸಿ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟರೂ ಜೆಡಿಎಸ್ ಕೊನೆಗೂ ಕಾಂಗ್ರೆಸ್‍ಗೆ ಕೈ ಕೊಡುತ್ತಿರುವುದು ಮೂಲ ಕಾಂಗ್ರೆಸಿಗರನ್ನು ಕಂಗೆಡಿಸಿದೆ. ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕಾದರೆ ಜೆಡಿಎಸ್ ಜತೆಗಿನ ಮೈತ್ರಿ ಸೂಕ್ತ ಮಾರ್ಗ ಎಂದು ಮೂಲ ಕಾಂಗ್ರೆಸಿಗರು ಯೋಜನೆ ರೂಪಿಸಿಕೊಂಡಿದ್ದರು. ಅದಕ್ಕಾಗಿ ಹೈಕಮಾಂಡ್ ಮಟ್ಟದಲ್ಲಿ ಒತ್ತಡಗಳನ್ನು ಹೇರಲಾಗಿತ್ತು.


ಇದರ ಸುಳಿವರಿತ ಸಿದ್ದರಾಮಯ್ಯ ಅವರು ಜೆಡಿಎಸ್‍ನ ಸಹವಾಸ ಮಾಡುವುದಿಲ್ಲ ಎಂದು ಬಹಿರಂಗ ಹೇಳಿಕೆನೀಡುವ ಮೂಲಕ ಮೈತ್ರಿ ಸಾಧ್ಯತೆಗಳಿಗೆ ಎಳ್ಳು-ನೀರು ಬಿಟ್ಟಿದ್ದರು. ಸಿದ್ದರಾಮಯ್ಯ ಅವರ ಈ ಬಹಿರಂಗ ಹೇಳಿಕೆಗಳಿಂದ ಸಿಟ್ಟಾದ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಪರವಾದ ಒಲವನ್ನು ವ್ಯಕ್ತಪಡಿಸುತ್ತಿದ್ದು, ಸಂದರ್ಭ ಬಂದರೆ ಯಡಿಯೂರಪ್ಪ ಅವರ ಸರ್ಕಾರ ಉಳಿಸಲು ಕೈಜೋಡಿಸುವುದಾಗಿಹೇಳಿಕೆ ನೀಡಿದ್ದರು.

ಈ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ಹಳೆ ದೋಸ್ತಿಗಳ ನಡುವೆ ಮುಸುಕಿನ ಗುದ್ದಾಟ ತಾರಕಕ್ಕೇರಿದೆ. ಈಗ ಉಪ ಚುನಾವಣೆಯಲ್ಲಿ ಮತ್ತೊಮ್ಮೆ ಸಿದ್ದರಾಮಯ್ಯ ಮತ್ತು ಜೆಡಿಎಸ್ ನಾಯಕರು ಪರಸ್ಪರ ಎದುರಾಳಿಗಳಾಗಿ ಸೆಣೆಸಲಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಹೆಚ್ಚು ಪ್ರಾಬಲ್ಯ ಇಲ್ಲದೇ ಇರುವುದರಿಂದ ಈ ನಾಲ್ಕು ಕ್ಷೇತ್ರಗಳನ್ನು ಜೆಡಿಎಸ್ ಗಂಭೀರವಾಗಿ ಪರಿಗಣಿಸಿದೆ.


ಸುಪ್ರೀಂಕೋರ್ಟ್ ಅನರ್ಹರ ಪರವಾಗಿ ತೀರ್ಪು ನೀಡಿದರೆ. ಮೈತ್ರಿ ಸರ್ಕಾರ ಕೆಡವಲು ಕಾರಣರಾದ 17 ಮಂದಿ ಶಾಸಕರ ಪೈಕಿ 15 ಶಾಸಕರು ಮತ್ತೆ ನೇರವಾಗಿ ಚುನಾವಣಾ ಅಖಾಡದಲ್ಲಿ ಸ್ಪರ್ಧಿಸಲಿದ್ದಾರೆ. ತಮ್ಮ ಸರ್ಕಾರವನ್ನು ಉಸಿರುಗಟ್ಟಿಸಿ ಪತನಗೊಳಿಸಿದ 15 ಮಂದಿ ಶಾಸಕರ ಮರು ಆಯ್ಕೆಗೆ ಕುಮಾರಸ್ವಾಮಿ ನೆರವಾಗಲಿದ್ದಾರೆಯೇ ಎಂಬ ಅನುಮಾನ ಕಾಡಲಾರಂಭಿಸಿದೆ ಅಥವಾ ಬಿಜೆಪಿಗೆ ನೆರವಾಗುವ ನೆಪದಲ್ಲಿ ಅನರ್ಹ ಶಾಸಕರ ಮೇಲೆ ಸೇಡು ತೀರಿಸಿಕೊಳ್ಳಲು ಪ್ಲ್ಯಾನ್ ನಡೆದಿದೆಯೇ ಎಂಬ ಸಂಶಯವೂ ಚರ್ಚೆಗೀಡಾಗುತ್ತಿವೆ.


మరింత సమాచారం తెలుసుకోండి: